ನೆನಪಿನ ಓಣಿ ~ 25 : ಕಲಿಕೆಯಲ್ಲೂ ಕೈಲಾಸವುಂಟು...
March 1, 2018
ವಿಭಾಗದ ಬೋಧನೆ ನನಗೆ ಪತ್ರಿಕೋದ್ಯಮದ ಜಗತ್ತನ್ನು ಪರಿಚಯಿಸಿತು. ಡಾ.ಬಾಲಸುಬ್ರಹ್ಮಣ್ಯ ಸರ್ ಅವರ ವಿಶಾಲ ಆಳ ಅಧ್ಯಯನದ ಫಲವಾಗಿ ಅವರು ಮಾಡುತ್ತಿದ್ದ ಪಾಠ ಮನಕ್ಕೆ ಇಳಿಯುತ್ತಿತ್ತು. ನಮ್ಮನ್ನು ದುಡಿಸುತ್ತಿದ್ದ ರೀತಿ, ಕೆಲಸ ಕಲಿಯುವಂತೆ ಬೈಯ್ದು ಬುದ್ಧಿವಾದ ಹೇಳುತ್ತಿದ್ದದ್ದು ಇಂದಿಗೂ ನನ್ನಲ್ಲಿ ನೆನಪಾಗಿ ಉಳಿದಿದೆ. ಬಾಲು ಸರ್ ಬಗ್ಗೆ ಅದೆಷ್ಟು ಭಯ ಇತ್ತೆಂದರೆ ಸಂಜೆ ವೇಳೆ "ಚೈನಿ" ಹೊಡೆಯಲು ಶ್ರೀನಗರ ಸರ್ಕಲ್‍ಗೆ ಹೋದಾಗ ಅವರ ಮಾರುತಿ 800 ಕಾರ್ ಕಂಡರೆ ನಾವು ಎದ್ನೋ ಬಿದ್ನೋ ಎಂದು ಅವರಿಗೆ ಕಾಣದಂತೆ ಬಚ್ಚಿಟ್ಟುಕೊಳ್ಳುತ್ತಿದ್ದೆವು.
~ ಇಮಾಮ್ ಗೋಡೆಕಾರ್

ನನ್ನ ಸೀನಿಯರ್‍ಗಳು, ನನ್ನ ಕ್ಲಾಸ್‍ಮೇಟ್‍ಗಳು ಹಾಗೂ ನನ್ನ ಜೂನಿಯರ್‍ಗಳು ನನ್ನ ಅರಿವಿನ ತಿಳಿವಿನ ವ್ಯಾಪ್ತಿಯನ್ನು ಹೆಚ್ಚಿಸಿದವರು. ಅದರಲ್ಲೂ ಅಕಾಡೆಮಿಕ್ ಅಧ್ಯಯನವನ್ನು ಸರಳಗೊಳಿಸಿದ ಶ್ರೇಯಸ್ಸು ಈ ಎಲ್ಲರಿಗೂ ಸಲ್ಲಲೇಬೇಕು. ನನ್ನ ಕ್ಲಾಸ್‍ಮೇಟಗಳದೊಂದು "ಸ್ಟಡಿ ಸರ್ಕಲ್" ಇತ್ತು. ನಾನು, ಸಂತೋಷ ಶೀಲವಂತ, ಮಂಜುನಾಥ್ ಹೆಗಡೆ, ದೀಪಕ್ ಕರಾಡೆ, ಸೋಮು ಅಗಸಿಮನಿ ಹಾಗೂ ರಮೇಶ್ ಅರೋಲಿ. ನಾವೆಲ್ಲ ಜೊತೆಯಾಗೇ ಓದುತ್ತಿದ್ದೆವು. ದಿವಂಗತ ಡಿ ಸಿ ಪಾವಟೆ ಸಾಹೇಬರ ಸಮಾಧಿಯ ಮಂಟಪವೇ ನಮ್ಮ ಓದಿನ ಜಾಗ. ಆ ಮಂಟಪ ಶಾಲ್ಮಲಾ ಹಾಸ್ಟೇಲ್ ಸಮೀಪದ ತೋಟದಲ್ಲಿ ಇದ್ದಿದ್ದರಿಂದ ಸದಾ ಬೀಸುವ ಗಾಳಿ ಮಂಟಪದ ನೆರಳು ಅಪ್ಯಾಯಮಾನವಾಗಿರುತ್ತಿತ್ತು. ಒಬ್ಬರು ಇಂಗ್ಲೀಷಿನಲ್ಲಿ ನೋಟ್ಸ್ ಮಾಡಿದರೆ ಮತ್ತೊಬ್ಬರು ಅದನ್ನು ಕನ್ನಡಕ್ಕೆ ಟ್ರಾನ್ಸಲೇಟ್ ಮಾಡುತ್ತಿದ್ದೆವು. ಜೊತೆಗೆ ಒಬ್ಬೊಬ್ಬರೂ ಒಂದೊಂದು ಚಾಪ್ಟರ್ ಅನ್ನು ತೆಗೆದುಕೊಂಡು ಎಕ್ಸಪ್ಲೇನ್ ಮಾಡುತ್ತಿದ್ದೆವು. ಇದೇ ರೀತಿ ಎಲ್ಲ ವಿಷಯಗಳಲ್ಲೂ ಮಾಡುತ್ತಿದ್ದೆವು. ಇದು ವಿಷಯಗಳ ಅಧ್ಯಯನಕ್ಕೆ ಮತ್ತು ಅರ್ಥ ಮಾಡಿಕೊಳ್ಳಲು ಹೆಚ್ಚು ನೆರವು ಆಯಿತು. ಒಬ್ಬೊಬ್ಬರದು ಒಂದು ವಿಶೇಷ ಇತ್ತು. ಟ್ರಾನ್ಸಲೇಷನ್‍ನಲ್ಲಿ ಹೆಗಡೆ ಅರೋಲಿಯನ್ನು ಬಿಟ್ಟರೆ ನಂತರದ ಜಾಗ ನನ್ನದಾಗಿತ್ತು. ಸಂತೋಷ್ ಯಾವುದೇ ವಿಷಯದ ನೋಟ್ಸ್ ಇರಲಿ ಅದನ್ನು ತಯಾರಿಸುತ್ತಿದ್ದ. ಕೆಲವು ಸಲ ನೋಟ್ಸ್‍ಗೆ ಪುಸ್ತಕಗಳೇ ಸಿಗುತ್ತಿರಲಿಲ್ಲ. ಆಗ ಲೈಬ್ರರಿಯಲ್ಲಿನ ನಮ್ಮ ವಿಭಾಗದ ಪುಸ್ತಕಗಳನ್ನೆಲ್ಲ ಜಾಲಾಡಿ ಹೇಗೋ ಒಂದು ಮಾಡಿ ನೋಟ್ಸ್ ಕಲೆ ಹಾಕುತ್ತಿದ್ದ ಗಟ್ಟಿಗ ಸಂತೋಷ್. ದೀಪಕ್ ಇತರೆ ಅಸೈನ್‍ಮೆಂಟ್‍ಗಳನ್ನು ತಯಾರಿಸಲು ಬೇಕಾಗುವ ಎಲ್ಲ ನೆರವೂ ನೀಡುತ್ತಿದ್ದ. ವಿದ್ಯಾ ಸಮಾಚಾರ ಲ್ಯಾಬ್ ಜರ್ನಲ್ ನ ಪೇಜ್ ಮೇಕಿಂಗ್ ಕೆಲಸ ಅವನದೇ ಆಗಿತ್ತು. ಹಲವು ವರ್ಷಗಳ ಕಾಲ ಬದಲಾಗದೇ ಇದ್ದ ಲ್ಯಾಬ್ ಜರ್ನಲ್ ಅನ್ನು ಪೇಜ್‍ಗೆ ಒಂದೊಂದು ಹೆಸರು ಕೊಟ್ಟು ಅದರ ರೂಪ ಬದಲಿಸಿದ ಬ್ಯಾಚ್ ನಮ್ಮದು. ಮುಂದೆ ಯುವಜನ ಮೇಳ ನಡೆದಾಗ ಎರಡು ದಿನ ಅವತ್ತಿನ ಸುದ್ದಿಗಳನ್ನು ಅವತ್ತೇ ಪ್ರಕಟಿಸುವ ನಿರ್ಧಾರ ಮಾಡಿದೆವು. ಹೆಚ್‍ಓಡಿ ಬಾಲಸುಬ್ರಹ್ಮಣ್ಯ ಸರ್ ನಮ್ಮ ಉತ್ಸಾಹಕ್ಕೆ ಬೆಂಬಲಿಸಿದರು.
ನಮ್ಮ ಜೂನಿಯರ್ ಆಗಿದ್ದ ಪ್ರತೀಕ್ ಆಲೂರು ಬಳಿಯಿದ್ದ ಕ್ಯಾಮೆರಾ ಹಾಗೂ ಡಿಪಾರ್ಟಮೆಂಟಿನ ಕ್ಯಾಮೆರಾ ಬಳಸಿ ಎಲ್ಲ ಈವೆಂಟ್‍ಗಳ ಫೋಟೊ ಪಡೆಯುವುದೆಂದು ನಿರ್ಧರಿಸಿದೆವು. ರಿಪೋರ್ಟಿಂಗ್ ಹಾಗೂ ಡೆಸ್ಕ್ ಎಂದು ಎರಡು ತಂಡಗಳನ್ನು ಮಾಡಿ ಲ್ಯಾಬ್‍ನ ಕಂಪ್ಯೂಟರ್‍ಗಳನ್ನೇ ಬಳಸಿಕೊಂಡು ಯುನಿವರ್ಸಿಟಿಯ ಪ್ರೆಸ್‍ನಲ್ಲಿ ಅವತ್ತಿನ ಸುದ್ದಿಗಳ ಪತ್ರಿಕೆಯನ್ನು ಅವತ್ತೇ ಮುದ್ರಿಸಿ ಯುವಜನ ಮೇಳದಲ್ಲಿ ಹಂಚಿದೆವು. ಆ ವರದಿಗಾರಿಕೆ, ವಿಶೇಷ ಲೇಖನಗಳು, ಮನಮೋಹಕ "ಕ್ಯಾಚಿ" ಹೆಡ್‍ಲೈನ್‍ಗಳು ಪತ್ರಿಕೆಯನ್ನು ರಂಗು ರಂಗಾಗಿಸಿದ್ದವು. ವಿವಿಧ ಕಾಲೇಜುಗಳಿಂದ ಬಂದಿದ್ದ ಯುವಜನ ಸ್ಪರ್ಧಾಳುಗಳು ಪತ್ರಿಕೆಯಲ್ಲಿ ತಮ್ಮ ಫೋಟೋ ಸುದ್ದಿಯನ್ನು ಕಂಡಾಗ ಅವರ ಮುಖದಲ್ಲಿನ ಸಂಭ್ರಮ ನೋಡುವಂತಿತ್ತು. ಇದರ ಪರಿಣಾಮವಾಗಿ ಮುಂದೆ ನಮ್ಮ ಜೂನಿಯರ್ ಬ್ಯಾಚ್‍ನವರು ಅವತ್ತಿನ ಸುದ್ದಿಯನ್ನು ಅವತ್ತೇ ಪ್ರಕಟಿಸುವ ಒಂದು ಪುಟದ ಪತ್ರಿಕೆಯನ್ನು ತಯಾರು ಮಾಡಲು ಶುರು ಮಾಡಿದರು. ವಿದ್ಯಾಸಮಾಚಾರ ಲ್ಯಾಬ್ ಜರ್ನಲ್ ಅನ್ನು ಕಾರಣಾಂತರಗಳಿಂದ ತಿಂಗಳಿಗೆ ಒಮ್ಮೆಯೂ ಪ್ರಕಟಿಸುವುದು ದುಸ್ತರ ಎನಿಸಿದ ದಿನಗಳೂ ಇದ್ದವು. ಅದಕ್ಕೆ ಕಾರಣಗಳೂ ಇದ್ದವು. ಆದರೆ ಅಂತಹ ಪರಿಸ್ಥಿತಿಯನ್ನು ಬ್ರೇಕ್ ಮಾಡಿ ಅವತ್ತಿನ ಸುದ್ದಿ ಅವತ್ತೇ ವಿದ್ಯಾ ಸಮಾಚಾರದಲ್ಲಿ ಪ್ರಕಟಿಸಿದ್ದು ನಮ್ಮ ವಿಭಾಗದ ಅಷ್ಟೂ ವರ್ಷಗಳ ಹೊಸ ಪ್ರಯತ್ನಗಳಲ್ಲಿ ಅದೂ ದಾಖಲಾರ್ಹ.
ಇದಕ್ಕೂ ಒಂದು ವರ್ಷ ಮೊದಲು ಸೀನಿಯರ್‍ಗಳ ಜೊತೆ ಶಾರ್ಟ್ ಮೂವಿ ಮಾಡಿದ್ದು ವಿಶೇಷ ಅನುಭವ. ಸಿನೆಮಾ ವಿಷಯಕ್ಕೆ ಸಂಬಂಧಿಸಿ ಪ್ರಾಕ್ಟಿಕಲ್ ಗಾಗಿ ಒಂದೊಂದು ಶಾರ್ಟ್ ಫಿಲ್ಮ್ ಮಾಡಬೇಕಿತ್ತು. ಸೀನಿಯರ್‍ಗಳು ನಾಲ್ಕು ಜನರ ಟೀಮ್ ಮಾಡಿಕೊಂಡು ಜೂನಿಯರ್‍ಗಳಾದ ನಮ್ಮ ಸಹಾಯವನ್ನೂ ಪಡೆದರು. ನಾನು ಭೂಷಿಯ ಟೀಮ್‍ನಲ್ಲಿದ್ದೆ. ಭೂಷಿ "ಏನನ್ನೂ ಮಾಡಿದರೂ ಕೆಲಸದಲ್ಲಿ "ಡೆಪ್ತ್" ಇರಬೇಕಲೇ" ಎಂದು ಹೇಳುತ್ತಿದ್ದ. ಅದು ಪತ್ರಕರ್ತ ರವಿ ಬೆಳೆಗೆರೆ ಬರೆದಿರುವ ಪಾವೆಂ ಹೇಳಿದ ಕಥಾ ಸಂಕಲನದ ಕತೆ ಕೊನೆಯನ್ನು ಫಿಲ್ಮ್ ಮಾಡಲು ಆಯ್ಕೆ ಮಾಡಿಕೊಂಡಿದ್ದ.
ಕತೆಯನ್ನು ಚಿತ್ರಕತೆಯನ್ನಾಗಿಸಿ ಡೈಲಾಗ್ ಬರೆದದ್ದು ಭೂಷಿಯೇ. ಡೈರೆಕ್ಷನ್ ಕೂಡ ಅವನದೇ. ಫಿಲ್ಮ್‍ನಲ್ಲಿ ಕಥಾನಾಯಕ ರವಿ ಬೆಳಗೆರೆ ಪಾತ್ರ ನನ್ನದು. ನನ್ನ ಸೀನಿಯರ್ ಆಶಾ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದರು. ಇನ್ನೂ ಪತ್ರಕರ್ತನಾಗದ ನಾನು ಪತ್ರಕರ್ತನ ಪಾತ್ರ ಅಭಿನಯಿಸುವುದು ಮಜವೇ. ವಿಭಾಗದ ಹೆಚ್‍ಓಡಿ ಬಾಲಸುಬ್ರಹ್ಮಣ್ಯ ಸರ್ ಚೇಂಬರ್, ಲ್ಯಾಬ್, ಕಲ್ಯಾಣ ನಗರದ ಒಂದು ಅಪಾರ್ಟ್‍ಮೆಂಟ್, ಪ್ರತೀಕ್ ಆಲೂರನ ರೂಮು ಹೀಗೆ ಇವು ಶೂಟಿಂಗ್ ಸ್ಪಾಟ್‍ಗಳು. ಹಲವು ದಿನಗಳ ಕಾಲ ನಡೆದ ಶೂಟಿಂಗ್ ನಲ್ಲಿ ನನಗೆ ವೃತ್ತಿಪರತೆ ಎಂದರೇನೆಂದು ಅರ್ಥ ಆಯಿತು. ಭೂಷಿ ಅಪ್ಪಟ ಡೈರೆಕ್ಟರ್‍ನ ಹಾಗೆ ಆಕ್ಷನ್ ಕಟ್ ಹೇಳುತ್ತಿದ್ದ. ಒಂದು ಸಲವಂತೂ ಈಗಾಗಲೇ ಶೂಟಿಂಗ್ ಆಗಿದ್ದರ ಮೇಲೆ ಓವರ್‍ಲ್ಯಾಪ್ ಆಗಿ ಭೂಷಿ ಗರಂ ಆಗಿದ್ದು. ಇದ್ದದ್ದು ಒಂದೇ ಕ್ಯಾಮೆರಾ. ಅದೂ ವಿಹೆಚ್‍ಎಸ್ ಕ್ಯಾಮೆರಾ. ಅದರಲ್ಲಿಯೇ ಶೂಟಿಂಗ್ ಮಾಡಿ ಮುಗಿಸಿದೆವು. ಅಶೋಕ ಶೆಟ್ಟರ್ ಪಾತ್ರವನ್ನು ಮಂಜುನಾಥ್ ಅಂಗಡಿ, ಗೌಡನ ಪಾತ್ರವನ್ನು ನನ್ನ ಗೆಳೆಯ ಡಿ ಬಿ ವಣಗೇರಿ ನಿರ್ವಹಿಸಿದ್ದರು. ಆದರೆ ತಾಂತ್ರಿಕ ಸವಲತ್ತುಗಳಿಲ್ಲದ ಕಾರಣ ಆ ಶಾರ್ಟ್ ಫಿಲ್ಮ್ ಕ್ಯಾಸೆಟ್‍ನಲ್ಲಿಯೇ ಉಳಿಯಿತು. ಆದರೆ ಕ್ಯಾಸೆಟ್‍ನಲ್ಲಿರುವುದನ್ನೇ ಹೆಚ್‍ಓಡಿಗೆ ತೋರಿಸಿ ಶಹಬ್ಬಾಸಗಿರಿಯನ್ನೂ ಪ್ರಾಕ್ಟಿಕಲ್ ಮಾಕ್ರ್ಸಗಳನ್ನೂ ಸೀನಿಯರ್‍ಗಳು ಪಡೆದರು. ಮುಂದೆ ಭೂಷಿ ಫೈನಲ್ ಇಯರ್ ಮುಗಿಸಿ ಹೋಗುವಾಗ ನನಗೆ ಆ ಕ್ಯಾಸೆಟನ್ನು ಕೊಟ್ಟ. ಅದನ್ನು ನಾನು ಅನಘ್ರ್ಯ ರತ್ನವೇನೋ ಎಂಬ ರೀತಿಯಲ್ಲಿ ಎರಡೂ ಕೈಗಳಿಂದ ಪಡೆದೆನು. ಮುಂದೆ ಅದರ ಸಿಡಿ ಕೂಡ ಮಾಡಿಸಿ ಒಮ್ಮೆ ಎಡಿಟಿಂಗ್ ಮಾಡಿದ್ದೆ ಕೆಲಸಕ್ಕೆ ಸೇರಿದ ಮೇಲೆ. ಆದರೆ ಆ ಫಿಲ್ಮ್‍ನ ಹಣೆಬರಹವೋ? ನನ್ನ ಹಣೆಬರಹವೋ? ಎಡಿಟ್ ಮಾಡಿದ್ದು ಮತ್ತೆ ಅದೆಲ್ಲೋ ಕಳೆದು ಹೋಯಿತು. ಆದರೆ ಅದೇ ವಿಹೆಚ್‍ಎಸ್ ಕ್ಯಾಸೆಟ್ ಮಾತ್ರ ಇನ್ನೂ ಇದೆ.
ಇನ್ನು ವಿಭಾಗದ ಬೋಧನೆ ನನಗೆ ಪತ್ರಿಕೋದ್ಯಮದ ಜಗತ್ತನ್ನು ಪರಿಚಯಿಸಿತು. ಡಾ.ಬಾಲಸುಬ್ರಹ್ಮಣ್ಯ ಸರ್ ಅವರ ವಿಶಾಲ ಆಳ ಅಧ್ಯಯನದ ಫಲವಾಗಿ ಅವರು ಮಾಡುತ್ತಿದ್ದ ಪಾಠ ಮನಕ್ಕೆ ಇಳಿಯುತ್ತಿತ್ತು. ನಮ್ಮನ್ನು ದುಡಿಸುತ್ತಿದ್ದ ರೀತಿ, ಕೆಲಸ ಕಲಿಯುವಂತೆ ಬೈಯ್ದು ಬುದ್ಧಿವಾದ ಹೇಳುತ್ತಿದ್ದದ್ದು ಇಂದಿಗೂ ನನ್ನಲ್ಲಿ ನೆನಪಾಗಿ ಉಳಿದಿದೆ. ಬಾಲು ಸರ್ ಬಗ್ಗೆ ಅದೆಷ್ಟು ಭಯ ಇತ್ತೆಂದರೆ ಸಂಜೆ ವೇಳೆ "ಚೈನಿ" ಹೊಡೆಯಲು ಶ್ರೀನಗರ ಸರ್ಕಲ್‍ಗೆ ಹೋದಾಗ ಅವರ ಮಾರುತಿ 800 ಕಾರ್ ಕಂಡರೆ ನಾವು ಎದ್ನೋ ಬಿದ್ನೋ ಎಂದು ಅವರಿಗೆ ಕಾಣದಂತೆ ಬಚ್ಚಿಟ್ಟುಕೊಳ್ಳುತ್ತಿದ್ದೆವು. ಒಂದು ವೇಳೆ ಕಂಡುಬಿಟ್ಟರೆ ಮರುದಿನ ಪಾಠ ಮಾಡುವಾಗ ಇಂಡೈರೆಕ್ಟಾಗಿ ಮಂಗಳಾರತಿ ಆಗುತ್ತಿತ್ತು. ಕೆಲಸವನ್ನು ನಿಗದಿತ ಟೈಮೊಳಗೆ ಮಾಡಬೇಕು, ಶಿಸ್ತುಬದ್ಧವಾಗಿ ಓದಬೇಕು, ಬರೀಬೇಕು ಎಂದು ಅವರು ಪ್ರೇರೇಪಿಸುತ್ತಿದ್ದರು. ಪಿಯುಸಿಯ ನಂತರ ಡಿಗ್ರಿ ಓದುವ ಮೂರು ವರ್ಷ ಒಂದು ನೋಟ್‍ಬುಕ್ಕೋ? ಅಥವಾ ಒಂದಿಷ್ಟು ಬಿಳಿ ಹಾಳೆಗಳನ್ನಿಟ್ಟುಕೊಂಡೋ ಅದರಲ್ಲೇ ನೋಟ್ಸ್ ಬರೆದುಕೊಳ್ಳುತ್ತಿದ್ದ ನನ್ನಂತಹವರೂ ಕೂಡ ಎಂಎ ಓದುವ ಎರಡೂ ವರ್ಷ ಹೆಗಲಿಗೆ ಕಡ್ಡಾಯವಾಗಿ ಬ್ಯಾಗ್ ಹಾಕಬೇಕಿತ್ತು. ಹಾಗೆ ನಮ್ಮೊಳಗೊಂದು ಶಿಸ್ತನ್ನು ಕಲಿಸಿದ್ದು ಬಾಲು ಸರ್. ಕಮಿಟ್‍ಮೆಂಟ್‍ಗೆ ಮತ್ತೊಂದು ಹೆಸರೇ ಬಾಲು ಸರ್. ದೆಹಲಿ ಸ್ಟಡಿ ಟೂರ್ ವೇಳೆ ಅವರು ಪಾದರಸದಂತೆ ನಮ್ಮನ್ನು ಎಲ್ಲ ಸುದ್ದಿ ಸಂಸ್ಥೆಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸಿದರು. ವಿದ್ಯಾರ್ಥಿಗಳಿಗೆ ಅಧ್ಯಯನದ ಭಾಗವಾಗಿ ದಕ್ಕಬೇಕಾದುದನ್ನು ದಕ್ಕಿಸಲು ಹೆಣಗುತ್ತಿದ್ದ ಅಪ್ಪಟ ಗುರು ಬಾಲು ಸರ್.
ಆದರೆ ಡಾ. ಗಂಗಾಧರಪ್ಪ ಸರ್ ಅವರದು ವಿಭಿನ್ನ ಶೈಲಿ. ಸಿಲೆಬಸ್ ಓದಿ ಮಾಡೋದೇನಿದೆ? ವಾಸ್ತವ ಜಗತ್ತೇ ಬೇರೆ ಇದೆ ಎನ್ನುತ್ತಿದ್ದರು. ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಹನ್ನೆರಡು ವರ್ಷಗಳ ಹಿಂದೆಯೇ ಗಂಗಾಧರಪ್ಪ ಸರ್ ಭಾವಿ ಪತ್ರಕರ್ತರ ಮುಂದೆ ಖಂಡತುಂಡವಾಗಿ ಖಂಡಿಸುತ್ತಿದ್ದರು. "ಏನ್ರಯ್ಯಾ ನೀವು ಇದ್ದೀರಲ್ಲ, ಪತ್ರಕರ್ತರು ನಿಮ್ಮನ್ನು ಒಂದು ದಿನ ಜನ ಅಟ್ಟಾಡಿಸಿಕೊಂಡು ಹೊಡೀತಾರೆ" ಕಣ್ರಯ್ಯ ಎನ್ನುತ್ತಿದ್ದರು. ಆ ಮೂಲಕ ನಮ್ಮಲ್ಲಿ ಜನಪರತೆಯನ್ನು ಹುಟ್ಟು ಹಾಕುತ್ತಿದ್ದರು. ಅದೇ ರೀತಿ ಡಾ. ನಯನಾ ಮೇಡಂ, ಸಿ ಎಸ್ ಪಾಟೀಲ್ ಹಾಗೂ ಫೈನಲ್ ಇಯರ್‍ಗೆ ಉಪನ್ಯಾಸಕರಾಗಿ ಬಂದ ಹರ್ಷವರ್ಧನ ಸರ್ ಎಲ್ಲರೂ ನಮ್ಮನ್ನು ಸರಿ ದಾರಿಯಲ್ಲಿ ತರಲು ಹೆಣಗಿದವರೇ.
ಕೊಂಚ ಬಲಪಂಥೀಯರೇನೋ? ಎಂಬ ಅನುಮಾನ ಹರ್ಷಾ ಸರ್ ಮೇಲೆ ಬಂದ ಪರಿಣಾಮ ಅವರು ನಾನು ಮೆಚ್ಚಿದ ಗುರು ಎಂಬ ಟಾಪಿಕ್ ಕೊಟ್ಟಾಗ ಎಂ ಡಿ ವಕ್ಕುಂದ ಅವರ ಬಗ್ಗೆ ಬರೆಯುತ್ತ "ಸಿದ್ಧಾಂತದ ಚಪ್ಪಲಿ ಹಾಕಿಕೊಂಡು ಬರುವ ಉಪನ್ಯಾಸಕರ ನಡುವೆ ವಕ್ಕುಂದ ಅವರು ಸ್ಮರಣೀಯರು" ಎಂದು ಅದೇ ಪ್ರಬಂಧದಲ್ಲಿ ಅವರನ್ನು ಕೆಣಕಿದ್ದೆ.
ಅದು ಅವರಿಗೆ ತಾಕಿತ್ತು. ಪ್ರಬಂಧಗಳನ್ನೆಲ್ಲ ಓದಿ ಆದ ಮೇಲೆ ಅವರೂ ನನ್ನನ್ನು ಕುಟುಕಿದರು. "ಕೆಲವರು ಈಗಲೇ ರವಿ ಬೆಳಗೆರೆ ಆಗುತ್ತಿದ್ದಾರೆ" ಎಂದರು. ಪಾಠ ಮಾಡುವುದನ್ನು ಮತ್ತು ಕಲಿಕೆಯನ್ನು ಅಗತ್ಯಕ್ಕಿಂತ ಹೆಚ್ಚೇ ಗಂಭೀರವಾಗಿ ಹರ್ಷಾ ಸರ್ ಪರಿಗಣಿಸಿದ್ದರು. ನಾವು ಅವರು ಕೊಟ್ಟ ಕೆಲಸಗಳನ್ನೆಲ್ಲ ಮಾಡಿಯೂ ಅವರನ್ನು ರೇಗಿಸುವುದಿತ್ತು.
"ಫೈನಲ್ ಇಯರ್ ಸ್ಟೂಡೆಂಟ್ಸ್" ಎಂಬ ಕೋಡು ಬೆಳೆಸಿಕೊಂಡಿದ್ದ ನಮಗೆ ಹರ್ಷಾ ಸರ್ ನಮಗೆ ಕೊಡುತ್ತಿದ್ದ ಅಸೈನ್‍ಮೆಂಟ್‍ಗಳು ವಿಚಿತ್ರ ಎನಿಸುತ್ತಿದ್ದವು. ಬೆಳಿಗ್ಗೆ ಎದ್ದು ರೇಡಿಯೋದಲ್ಲಿ ಪ್ರದೇಶ ಸಮಾಚಾರ ಕೇಳಿಸಿಕೊಂಡು ಅದರಲ್ಲಿ ಬಂದ ಮುಖ್ಯಾಂಶಗಳನ್ನು ಬರೆದು ಕೊಡಬೇಕಿತ್ತು. ನಾವೆಲ್ಲ "ಸೂರ್ಯಪುತ್ರರು" ಪ್ರದೇಶ ಸಮಾಚಾರ ಎಲ್ಲಿ ಕೇಳುವುದು?
ಆರಂಭದಲ್ಲೇನೋ ಹಾಗೆ ಮಾಡಿದೆವು. ಆದರೆ ನಂತರದಲ್ಲಿ ಬೀಳಗಿ ಸೇರಿದಂತೆ ಸಬಿತಾ ಶೆಟ್ಟಿ ಮತ್ತಿತರರು ಬರೆದುಕೊಂಡು ಬಂದಿದ್ದನ್ನೇ ನಾವು ಕಾಪಿ ಮಾಡುತ್ತಿದ್ದೆವು. ಒಂದು ಸಲವಂತೂ ರಜೆಯ ದಿನ ಸ್ಪೆಶಲ್ ಕ್ಲಾಸ್ ಇಟ್ಟ ಹರ್ಷಾ ಸರ್ ಕಡ್ಡಾಯವಾಗಿ ಬರಲೇಬೇಕು ಎಂದರು. ಆದರೆ ನಾವೆಲ್ಲ ಕಡ್ಡಾಯವಾಗಿ ತಪ್ಪಿಸಿದೆವು. ನಂತರ ಮರುದಿನ ಕ್ಲಾಸಿನಲ್ಲಿ ಚೆನ್ನಾಗಿ ಬೈದರು. ಅವತ್ತು ರಜೆ ಇದ್ದ ಕಾರಣ, ಕ್ಲಾಸ್ ಬೆಳಗ್ಗೆಯೇ ಇಟ್ಟುಕೊಂಡಿದ್ದರಿಂದ ಹರ್ಷಾ ಸರ್ ನಮಗಾಗಿ ಸಿರಾ ಉಪ್ಪಿಟ್ಟು ಪಾರ್ಸೆಲ್ ತರಿಸಿದ್ದರು. ಅದೆಲ್ಲ ಹಾಳಾಯಿತು. ಅವರ ದುಡ್ಡು ವ್ಯರ್ಥವಾಯಿತು. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಕಾಳಜಿಯನ್ನು ನಾವು ಕಣ್ಮುಚ್ಚಿ ತಿರಸ್ಕರಿಸಿದ್ದೆವು. ಮುಂದೆ ಬಹಳ ದಿನಗಳ ಕಾಲ ಆ ಘಟನೆ ನನ್ನನ್ನು ಕಾಡಿತು. ಕೊನೆ ಕೊನೆಗೆ ನಮ್ಮ ಬ್ಯಾಚ್ ಬಗ್ಗೆ ಹರ್ಷಾ ಸರ್ ಅಭಿಮಾನ ಬೆಳೆಸಿಕೊಂಡರು. ನಾವು ಎಂಎ ಮುಗಿಸಿದ ಮೇಲೆ ಅವರೂ ನಮ್ಮನ್ನು ತುಂಬ ನೆನೆದರು. ಈಗಲೂ ಸಿಕ್ಕಾಗ ಪ್ರೀತಿಯಿಂದ ಮಾತಾಡಿಸುತ್ತಾರೆ.
ಕಲಿಕೆಯಲ್ಲೂ ಕೈಲಾಸದ ದಾರಿ ತೋರಿದ ಅಂಗನವಾಡಿಯ ಮಾಳೋದೆ ಮೇಡಂ ನಿಂದ ಹರ್ಷಾ ಸರ್ ವರೆಗೆ ಎಲ್ಲಾ ಗುರುಗಳಿಗೂ ಸ್ನೇಹಿತರಿಗೂ ಹಿರಿಯರು ಕಿರಿಯರಿಗೂ ಮತ್ತೂ ಈ ಕ್ಷಣ ಪಾಠ ಕಲಿಸುತ್ತಲೇ ಇರುವ ಬದುಕಿನ ಪ್ರತಿ ಕ್ಷಣಗಳಿಗೂ ಸಲಾಮು ಮಾಡುತ್ತೇನೆ....
May 1, 2019
March 22, 2019
March 19, 2019
