ಬಿಜೆಪಿ ಹೇಳುವ 'ಉದ್ದೇಶಪೂರ್ವಕ ಸುಳ್ಳು'ಗಳು
February 21, 2018
ಮೋದಿ, ಶಾ ಮಾತ್ರವಲ್ಲ, ಇಂಥ ಸುಳ್ಳುಗಳನ್ನು ಹರಿಬಿಡುವುದು ಬಿಜೆಪಿಯವರಿಗೊಂದು ಖಯಾಲಿಯೇ ಆಗಿಹೋಗಿದೆ. ಪೆಟ್ಟು ತಿನ್ನುವ ಪ್ರತಿಯೊಬ್ಬ ಹಿಂದೂ ಹೆಸರಿನ ವ್ಯಕ್ತಿ 'ಬಿಜೆಪಿ ಕಾರ್ಯಕರ್ತ'ನಾಗುವುದು ಪಕ್ಷದ ಮತ್ತೊಂದು ಮಹಾನಾಟಕ. ಅದೇ ವೇಳೆಗೆ, ನಿಜವಾಗಿಯೂ ಬಿಜೆಪಿಯವರೇ ಆಗಿದ್ದು, ಬಿಜೆಪಿ/ ಹಿಂದುತ್ವವಾದಿ ಸಂಘಟನೆಗಳಿಂದ ಕೊಲೆಯಾಗಿಹೋದವರ ಬಗ್ಗೆ ಇವರ ಮಾತಿಲ್ಲ ಇದಕ್ಕೆ ಕಾರಣ ಬಹಳ ಸರಳ. ಈ ಮಂದಿಗೆ ಸುಳ್ಳು ಹೇಳಿ ಅಭ್ಯಾಸವೇ ಹೊರತು ಸತ್ಯ ಅಪಥ್ಯ.

‘ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮದ್ ನಲಪಾಡ್‌ನಿಂದ ಹಲ್ಲೆಗೊಳಗಾಗಿರುವ ವಿದ್ವತ್ ನಮ್ಮ ಕಾರ್ಯಕರ್ತ’ ಎಂದು ನೆನ್ನೆ (ಫೆ.20) ಮಧ್ಯಾಹ್ನ ಮಂಗಳೂರಿನ ಬಿ.ಸಿ.ರೋಡ್ ಭಾಷಣದಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಂಜೆಯ ವೇಳೆಗೆ ಸುರತ್ಕಲ್‌ನಲ್ಲಿ ಅದನ್ನು ಹಿಂಪಡೆದು, ತಾನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ್ದೆಂದು ತಿಪ್ಪೆ ಸಾರಿಸಿದ ಘಟನೆ ನಡೆದಿದೆ.
ಅಮಿತ್ ಶಾ ಹೇಳಿದ ಈ 'ಉದ್ದೇಶಪೂರ್ವಕ ಸುಳ್ಳು' ಪ್ರಕರಣ ಭಕ್ತರ ಕುರುಡನ್ನು ಸ್ವಲ್ಪ ಮಟ್ಟಿಗಾದರೂ ಸರಿಪಡಿಸಬಹುದು ಎಂಬ ನಿರೀಕ್ಷೆ ಇದೆ.
ಹಾಗೆ ನೋಡಿದರೆ, ಬಿಜೆಪಿಗಾಗಲೀ ಅಮಿತ್ ಶಾಗಾಗಲೀ 'ಉದ್ದೇಶಪೂರ್ವಕ'ವಾಗಿ ಸುಳ್ಳು ಹೇಳುವುದು ಹೊಸತಲ್ಲ. ಚುನಾವಣಾ ಪ್ರಚಾರ ಭಾಷಣಗಳಲ್ಲಿ ವಿದೇಶಗಳಲ್ಲಿರುವ ಕಪ್ಪುಹಣ ಮೊಗೆದು ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಜಮೆ ಮಾಡುವ ("ಯೂಂ ಹಿ ಮುಫತ್ ಮೆ ದಸ್ ಪಂದ್ರಾಹ್ ಲಾಕ್ ಭರ್'ದೇಂಗೆ) ಅಂದಿದ್ದರು ನರೇಂದ್ರ ಮೋದಿ. ಮುಂದೆ ಅದನ್ನು ಅಮಿತ್ ಶಾ ಬಹಿರಂಗವಾಗಿಯೇ ತಳ್ಳಿ ಹಾಕಿ, "ಅದೊಂದು ಜುಮ್ಲಾ" ಅಂತ ಹೆಳುವ ಮೂಲಕ ಮೋದಿಯ ಸುಳ್ಳನ್ನು ಸಮರ್ಥಿಸಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ - ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಿಂತು ಹೇಳುವ ಸುಳ್ಳುಗಳಂತೂ ಮತ್ತಷ್ಟು ನಗೆಪಾಟಲಿನದು. ಇತ್ತೀಚೆಗೆ ಪರಿವರ್ತನಾ ರ್ಯಾಲಿಯಲ್ಲಿ ಮೋದಿ "ಎರಡು ಲಕ್ಷ ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೀನಿ" ಎಂದು ಭಾಷಣ ಬಿಗಿದು ಚಪ್ಪಾಳೆ ತಟ್ಟಿಸಿಕೊಂಡಿದ್ದರು. ಇದು ಮತ್ತೊಂದು "ಉದ್ದೇಶಪೂರ್ವಕ ಸುಳ್ಳು". ಬಹುಶಃ ಮತಗಳು ಬಂದು ಬೀಳಲೆಂಬ ಉದ್ದೇಶದಿಂದ ಹೇಳಿದ ಸುಳ್ಳು.
ಬುಲೆಟ್ ಟ್ರೈನ್ ಕಾರ್ಯಾಚರಣೆ ಬಗ್ಗೆ ಮೋದಿ ವಿವರಣೆ ಮತ್ತೊಂದು ಅಂಥದ್ದೇ ಹಸಿ ಸುಳ್ಳು. ಹೇಳುತ್ತಾ ಹೋದರೆ ಈ ಸುಳ್ಳುಗಳ ಪಟ್ಟಿ ಬಾಲದಂತೆ ಬೆಳೆಯುತ್ತದೆ.
ಮೋದಿ, ಶಾ ಮಾತ್ರವಲ್ಲ, ಇಂಥ ಸುಳ್ಳುಗಳನ್ನು ಹರಿಬಿಡುವುದು ಬಿಜೆಪಿಯವರಿಗೊಂದು ಖಯಾಲಿಯೇ ಆಗಿಹೋಗಿದೆ. ಪೆಟ್ಟು ತಿನ್ನುವ ಪ್ರತಿಯೊಬ್ಬ ಹಿಂದೂ ಹೆಸರಿನ ವ್ಯಕ್ತಿ 'ಬಿಜೆಪಿ ಕಾರ್ಯಕರ್ತ'ನಾಗುವುದು ಪಕ್ಷದ ಮತ್ತೊಂದು ಮಹಾನಾಟಕ. ಅದೇ ವೇಳೆಗೆ, ನಿಜವಾಗಿಯೂ ಬಿಜೆಪಿಯವರೇ ಆಗಿದ್ದು, ಬಿಜೆಪಿ/ ಹಿಂದುತ್ವವಾದಿ ಸಂಘಟನೆಗಳಿಂದ ಕೊಲೆಯಾಗಿಹೋದವರ ಬಗ್ಗೆ ಇವರ ಮಾತಿಲ್ಲ ಇದಕ್ಕೆ ಕಾರಣ ಬಹಳ ಸರಳ. ಈ ಮಂದಿಗೆ ಸುಳ್ಳು ಹೇಳಿ ಅಭ್ಯಾಸವೇ ಹೊರತು ಸತ್ಯ ಅಪಥ್ಯ.
ಉದಾಹರಣೆಗೆ ನೋಡಿ; ಕಳೆದ ವರ್ಷ ಶೋಭಾ ಕರಂದ್ಲಾಜೆ ವಿವಿಧ ಘಟನೆಗಳಲ್ಲಿ ಮೃತರಾದ 23 ಮಂದಿ ಹಿಂದೂಗಳ ಪಟ್ಟಿಯನ್ನು ಕೇಂದ್ರ ಗೃಹಖಾತೆಗೆ ಸಲ್ಲಿಸಿ ಇವರನ್ನೆಲ್ಲಾ ಮುಸ್ಲಿಮರು ಕೊಂದಿದ್ದಾರೆ ಮತ್ತು ಇವರಿಗೆ ಪಿಎಫ್ಐ ಹಾಗೂ ಎಸ್ ಡಿಪಿಐ ಬೆನ್ನೆಲುಬಾಗಿ ನಿಂತಿದೆ ಎಂದು ಆರೋಪ ಮಾಡಿ ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದರು.
ವಾಸ್ತವದಲ್ಲಿ ಶೋಭಾ ಕರಂದ್ಲಾಜೆ ಸೂಚಿಸಿದ 23 ಹಿಂದೂ ನಾಯಕರ/ಕಾರ್ಯಕರ್ತರ ಕೊಲೆಗಳಲ್ಲಿ ಅಶೋಕ್ ಪೂಜಾರಿ ಜೀವಂತವಿದ್ದು, ಉಳಿದ 19ರಲ್ಲಿ 11 ಮಂದಿ ಆತ್ಮಹತ್ಯೆ, ಗ್ಯಾಂಗ್ ವಾರ್ ಮೊದಲಾದ ಪ್ರಕರಣಗಳಲ್ಲಿ ಪ್ರಾಣ ತೊರೆದವರಾಗಿದ್ದರು. ಆದರೆ, ನಿಜವಾಗಿಯೂ ಬಿಜೆಪಿ ಕಾರ್ಯಕರ್ತನೇ ಆಗಿದ್ದ ಮತ್ತು ಬಿಜೆಪಿ ವ್ಯಕ್ತಿಯಿಂದಲೇ ಕೊಲೆಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ವಿನಾಯಕ ಬಾಳಿಗರ ಹೆಸರು ಶೋಭಾ ಕಳಿಸಿದ ಪಟ್ಟಿಯಲ್ಲಿ ಇರಲಿಲ್ಲ!
ಜಿಡಿಪಿ ಹೆಚ್ಚಳ, ಆರ್ಥಿಕ ನೀತಿ, ಕೃಷಿ, ಉದ್ಯೋಗ ಸೃಷ್ಟಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಬಿಜೆಪಿಯದ್ದು ಸುಳ್ಳಿನದ್ದೇ ಸಾಧನೆ. ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆಂದು ಯುವಜನರನ್ನು ಸೆಳೆದು ವೋಟು ಗಿಟ್ಟಿಸಿ, ನಂತರದಲ್ಲಿ 'ಪಕೋಡ ಮಾರೋದೂ ಉದ್ಯೋಗವೇ' ಎಂದು ಕೈಯಾಡಿಸಿದವರಿಂದ ನಾವು ಇನ್ನೂ ನಿಜಾಯಿತಿಯನ್ನು ನಿರೀಕ್ಷಿಸುತ್ತೇವೆ ಎಂದರೆ, ಅದು ನಮ್ಮದೇ ತಪ್ಪು. ಇಷ್ಟಕ್ಕೂ, ಉದ್ದೇಶಪೂರ್ವಕ ಸುಳ್ಳು ಹೇಳಿದೆವು, ಜುಮ್ಲಾ ಮಾಡಿದೆವು ಎಂದು ರಾಜಾರೋಷವಾಗಿ ಹೇಳಿಕೊಳ್ಳುವವರನ್ನು ದೂರುವುದಾದರೂ ಹೇಗೆ ಸಾಧ್ಯ!?
May 1, 2019
March 22, 2019
March 19, 2019
