ಗಾಂಧಿ ಮತ್ತು ಕವಿತೆ : ಸುನೈಫ್ ಅನುವಾದಿಸಿದ ಸಚ್ಚಿದಾನಂದನ್ ಪದ್ಯ
January 28, 2018

(ಚಿತ್ರ: ವಿಷ್ಣು ಪವನ್; ಇಂಟರ್ನೆಟ್'ನಿಂದ)
ಒಂದು ದಿನ ಸಣಕಲು ಕವಿತೆಯೊಂದು
ಗಾಂಧಿಯ ಕಾಣಲು ಆಶ್ರಮಕ್ಕೆ ಬಂತು
ಬಗ್ಗಿ ಕೂತು ರಾಮನಿಗೆಂದು
ನೂಲುತಿದ್ದರು ಗಾಂಧಿ
ತಾನೊಂದು ಭಜನೆಯಲ್ಲವೆಂದು ನಾಚಿ
ಬಾಗಿಲ ಬಳಿಯೇ ನಿಂತು ಬಿಟ್ಟ ಕವಿತೆಯನ್ನು
ಗಾಂಧಿ ಗಮನಿಸಲಿಲ್ಲ
ಕವಿತೆ ಕೆಮ್ಮಿದಾಗ
ತನ್ನ ನರಕ ಕಂಡ ಕನ್ನಡಕದೆಡೆಯಿಂದ
ನೋಡುತ್ತಾ ಕೇಳಿದರು ಗಾಂಧಿ:
ಎಂದಾದರೂ ನೂಲಿರುವೆಯೇ?
ಜಾಡಮಾಲಿಯ ಗಾಡಿ ಎಳೆದಿರುವೆಯೇ?
ಬೆಳಗಾನೆದ್ದು ಒಲೆ ಮುಂದೆ ಹೊಗೆ ಕುಡಿದಿರುವೆಯೇ?
ಎಂದಾದರೂ ಹಸಿದು ಮಲಗಿರುವೆಯೇ?
ಕವಿತೆ ಹೇಳಿತು:
ಹುಟ್ಟಿದ್ದು ಕಾಡಿನಲ್ಲಿ
ಬೇಟೆಗಾರನ ಬಾಯಲ್ಲಿ
ಬೆಳೆದದ್ದು ಮೀನುಗಾರಳ ಗುಡಿಸಲಲ್ಲಿ
ಆದರೂ ಹಾಡಲ್ಲದೆ ಬೇರೆ ಕೆಲಸ ತಿಳಿದಿಲ್ಲ.
ಎಷ್ಟೋ ಕಾಲ ಹಾಡುತ್ತಾ
ಅರಮನೆಯಲ್ಲಿ ಕಳೆದೆ
ಆಗೆಲ್ಲ ಕೊಬ್ಬಿ ಚೆಲುವಾಗಿದ್ದೆ
ಈಗ ಬೀದಿಯಲ್ಲಿರುವೆ, ಅರೆ ಹೊಟ್ಟೆಯಲ್ಲಿ.
ಗಾಂಧಿ ಮುಗುಳ್ನಗುತ್ತಾ ಹೇಳಿದರು:
'ಕೊನೆಯ ಸಂಗತಿ ಒಳ್ಳೆಯದೇ;
ಆದರೆ, ಸಂಸ್ಕೃತ ಮಾತು ಪೂರ್ತಿ ಬಿಡಬೇಕು.
ಹೊಲಕ್ಕೆ ಹೋಗು,
ರೈತನ ಮಾತುಗಳನ್ನು ಕೇಳು.'
ಕವಿತೆ ಬೀಜವಾಗಿ ಹೊಲಕ್ಕೆ ಬಂತು
ಮುಂಗಾರು ಸುರಿದು ಹೊಲ ಉಳಲು
ರೈತ ಬರುವ ದಿನಕ್ಕಾಗಿ ಕಾದು ಕುಳಿತಿತು.
May 1, 2019
March 22, 2019
March 19, 2019
