ಜಿಟಿಪಿಟಿ ಮಳೆಯಲ್ಲಿ ಬಾಲ್ಯದ ರಂಜಾನ್ ಮೆಲುಕು
June 25, 2017
ಹಬ್ಬಕ್ಕೆ ಹೊಸ ಬಟ್ಟೆ ತರುತ್ತಾನೆಂದು ಕೆಲಸದಿಂದ ಬರುವ ದಾರಿಯನ್ನೇ ಕಾಯುತ್ತ ನಿಂತಾಗ ಅಪ್ಪ ದುಡ್ಡಿಲ್ಲದೆ ಖಾಲಿ ಕೈಲಿ ಬಂದು ಬಟ್ಟೆ ಅಂಗಡಿಗಳು ಮುಚ್ಚಿದ್ದವು ಮಗಳೇ ಎಂದು ಸುಳ್ಳು ಹೇಳಿದಾಗಿನಿಂದ ಹಬ್ಬಕ್ಕೆ ಹೊಸ ಬಟ್ಟೆಗಾಗಿ ಮನ ಬಯಸುವುದಿಲ್ಲ. ಹಬ್ಬಕ್ಕಾಗಿ ಹೊಸ ಬಟ್ಟೆ ಕೊಳ್ಳುವ ಖುಷಿಯೂ ಈಗಿಲ್ಲ. ಸೀಮೆಣ್ಣೆ ದೀಪದ ಬೆಳಕಲ್ಲಿ ಕಳೆದ, ಕಳೆಯುತ್ತಿದ್ದ ರಂಜಾನ್ ದಿನಗಳು ಅಲಾರಾಂ ಇಲ್ಲದೆಯೇ ಸೆಹರಿಗಾಗಿ ಏಳುತ್ತಿದ್ದ ದಿನಗಳ ಖುಷಿಯೂ ಈಗಿಲ್ಲ ~ ನಜ್ಮಾ

ಇತೆಕಾಫ್ನಲ್ಲಿ ಕೂತು ಇಫ್ತಾರ್ ನಂತರ ಮಗ್ರೀಬ್ ನಮಾಜ್ ಮುಗಿಸಿ ಖುರಾನ್ ಓದುತ್ತಿದ್ದ ಅಮ್ಮಿ , “ಬೇಟಿ ನಿಶು ಹಾಳಾದ್ ಕರೆಂಟ್ ಮತ್ತೇ ಹೋಯ್ತು ಕಣೆ ಬಾರೆ ಇಲ್ಲಿ ಬಚ್ಚಲ ಒಲೆ ಹತ್ರ ದೀಪಕ್ಕೆ ಸೀಮೆಯೆಣ್ಣೆ ಹಾಕಿಟ್ಟಿದ್ದೀನಿ ದೀಪ ಹಚ್ಚು ಬಾ” ಎಂದು ಕೂಗಿದರು. ಎಚ್ಚರವಾಗದ ನಿಶಾ ಜಿಟಿ ಜಿಟಿ ಮಳೆ , ಅರೆ ಮಲೆನಾಡಿನ ಚುಮು ಚುಮು ಚಳಿ - ತಣ್ಣನೆ ಗಾಳಿ ಮುಸ್ಸಂಜೆ ಸಿಹಿ ಸವಿಯುತ್ತ ಮನೆ ಮುಂದಿನ ದೊಡ್ಡ ಕಿಟಕಿ ಪಕ್ಕದಲಿ ಕೂತು ಆ ಮಣ್ಣಿನ ಘಮಲ ನಶೆ ಏರಿಸಿಕೊಂಡಿದ್ದಾಳೆ.
ನಿಶ್ಶು… ನಿಶಾ …ಎಂದು ಎಷ್ಟು ಕೂಗಿದರೂ ನಿಶಾ ಮಾತ್ರ ಅದೇನೋ ಗಾಢ ಯೋಚನೆಯಲ್ಲಿ ಮಗ್ನ. ನಮಾಜ್ ಮುಗಿಸಿ ಬಂದ ತಮ್ಮ ನವಾಜ್ ಬೆನ್ನ ಮೇಲೆ ಜೋರು ಪೆಟ್ಟು ಕೊಟ್ಟು “ಏನೇ ಯೋಚಿಸ್ತಿದ್ದೀಯ ಅಮ್ಮಿ ಕೂಗುತ್ತಿರುವುದು ಕೇಳಿಸುತ್ತಿಲ್ವ” ಅಂದಾಗ ಎಚ್ಚರಗೊಂಡ ನಿಶಾ ಬಚ್ಚಲ ಮನೆಯಲ್ಲಿದ್ದ ದೀಪಗಳ ತಂದು ಅಮ್ಮಿ ಖುರಾನ್ ಓದುತ್ತಿದ್ದ ನಮಾಜ್ ಕೋಣೆಗೊಂದು, ನಡು ಮನೆಗೊಂದು ದೀಪ ಹಚ್ಚಿ ದೀಪದ ಮುಂದೆ ಕೂತು ತನ್ನೊಳಗೆ ತಾನು ಮಾತಾಡಿಕೊಳ್ಳುತ್ತಿದ್ದಾಳೆ. ರಂಜಾನ್ ತಿಂಗಳು ಎಷ್ಟು ಬೇಗ ಮುಗಿತು ಈ ಬಾರಿ! ಕರಾವಾಳಿಯವರಿಗೆ ಇಂದು ಚಂದ್ರ ದರ್ಶನವಾಯ್ತಂತೆ, ನಾಳೆ ಹಬ್ಬವಂತೆ… ನಾಡಿದ್ದು ನಮಗೆ…
ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ತಿಂಗಳು ಕಳೆದಿದೆ. ಆದರೆ ಹಳೇ ನೆನಪುಗಳು ಮಾತ್ರ ಇನ್ನು ಮಾಸದ ಮದರಂಗಿಯಂತೆ. ಪ್ರತಿ ದಿನದ ಮೂರು ಹೊತ್ತಿನ ಊಟದ ಖರ್ಚಿಗಿಂತ ಮೂರು ಪಟ್ಟು ಹೆಚ್ಚು ಒಂದು ಹೊತ್ತಿನ ಇಫ್ತಾರ್ಗೇ ಇವತ್ತು ಖರ್ಚು ಮಾಡುತ್ತಿದ್ದೇವೆ. ಇಫ್ತಾರ್ ಕೂಟಗಳು ಫ್ಯಾಷನ್ ಆಗಿವೆ. ರಂಜಾನ್ ತಿಂಗಳೆಂದು ಅಪ್ಪ ತನ್ನ ಮಾಲೀಕನ ಬಳಿ ಮುಂದಿನ ತಿಂಗಳ ಸಂಬಳವನ್ನು ಸೇರಿ ಸಾಲ ತಂದಿದ್ದಾನೆ. ದೊಡ್ಡ ಜನ ನೀಡೋ ಝಕಾತ್ ಮೋಸದ ಹಣದಿಂದ ರಂಜಾನ್ ನ ನಿಜವಾದ ಆಶಯ ಮರೆತಂತೆ ರಂಜಾನ್ ತಿಂಗಳ ಖುಷಿಯೂ ಕೂಡ ನನ್ನೊಳಗೆ ಮರೆಯಾಗುತ್ತಿದೆ. ಉಪವಾಸವಿದ್ದು ಇಫ್ತಾರ್ಗು ಮುನ್ನ ಅರ್ಧ ಗಂಟೆ ಮುಂಚೆಯೇ ನಾಲ್ಕಾಣೆಯ ಚಾಕ್ಲೆಟ್ ತಂದು ಇಫ್ತಾರ್ ಎಹಲಾನ್ ಗಾಗಿ ಕಾಯುತ್ತಿದ್ದ ಕಾತುರತೆ ಮರೆಯಾಗಿದೆ.
ಇವತ್ತಿನ ಪಿಟಿ ಪಿಟಿ ಮಳೆಯಂತೆ ಅವತ್ತು ಕೂಡ ಮಳೆ ಬರುತಿತ್ತು. ಮಳೆ ಮೋಡ ಇದ್ದುದರಿಂದ ಚಂದ್ರ ಕಾಣಿಸುತ್ತಿಲ್ಲ. ಆದರೂ ನಾನು ಮತ್ತು ತಮ್ಮ ಚಂದ್ರನ ನೋಡಲು ಮನೆ ಹಿಂದಿನ ಪಾಳು ಹೊಲದಲ್ಲಿ ನಿಂತು ಕಾಯುತ್ತಿದ್ದೆವು. ಪಕ್ಕದೂರಿನ ಚಂದ್ರ ದರ್ಶನ ಮಾಹಿತಿ ಪಡೆದು ಮಸ್ಜಿದ್ನಲ್ಲಿ ನಾಳೆ ಹಬ್ಬವೆಂದು ಪೇಷ್ ಇಮಾಮ್ ಏಹ್ಲಾನ್ ಮಾಡಿದಾಗ ಮನದೊಳಗೇನೋ ಖುಷಿ ಕುಣಿದಾಡುವಷ್ಟು ಸಂತಸ. ಅಪ್ಪ ಪೇಟೆಯಿಂದ ತಂದ ಹೊಸ ಬಟ್ಟೆ ತೊಟ್ಟು ಊರು ಸುತ್ತುವ ತವಕ. ಬಿರಿಯಾನಿ ಮತ್ತು ಸೇವ್ಯಂ ತಿನ್ನುವ ಕಾತುರ ನಮಗಾದರೆ, ಹದಿನೆಂಟು ವಯಸ್ಸಿನ ನನ್ನ ಅಮ್ಮನಿಗೆ ಬೇಗ ಬೇಗ ಮನೆ ಕೆಲಸ ಮುಗಿಸಿ ನನ್ನನ್ನು ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿ ಮೆಹೆಂದಿ ಹಾಕಿಸುವ ಆಸೆ. ಪಟ್ಟಣಕ್ಕೆ ಕೆಲಸಕ್ಕೆ ಹೋದಲ್ಲಿನಿಂದ ಹಬ್ಬಕ್ಕೆ ವಾರ ಮುಂಚೆಯೇ ಮೆಹೆಂದಿ ಕೋನ್ ತಂದಿಟ್ಟುಕೊಳ್ಳುತ್ತ ಮಗಳ ಕೈಗೆ ನನ್ನ ಚಿಕ್ಕಮ್ಮನ ಬಳಿ ಮೆಹೆಂದಿ ಹಾಕಿಸಲು ತಯಾರಿ ಮಾಡುತ್ತಿದ್ದಳು. ಬೇಗ ಬೇಗ ಮನೆ ಕೆಲಸ ಮುಗಿಸಿ ಒಂದು ಕೈಯಲ್ಲಿ ನನ್ನನ್ನು ಮತ್ತೊಂದು ಕೈಯಲ್ಲಿ ತಮ್ಮನನ್ನು ಹಿಡಿದುಕೊಂಡು, ನನ್ನ ಕೈಗೆ ಮೆಹೆಂದಿ ಕೋನ್ ಕೊಟ್ಟು ಮಳೆಯಲ್ಲೇ ನೆನೆಯುತ್ತ ಒಂದು ಮೈಲಿ ದೂರದಲ್ಲಿರುವ ಅಜ್ಜಿಯ ಮನೆಗೆ ನಮ್ಮಿಬ್ಬರನ್ನು ಎಳೆದುಕೊಂಡು ಹೋಗುತ್ತಿದ್ದ ಅಮ್ಮಿ ಚಿಕ್ಕಮ್ಮನ ಹತ್ತಿರ ನನ್ನ ಕೈಗೆರಡು ಮೆಹೆಂದಿ ಹೂವ ಬಿಡಿಸಲು ಅಜ್ಜಿಯ ಮನೆಯಲ್ಲೂ ಎಲ್ಲಾ ಕೆಲಸ ಮಾಡಿ ಮುಗಿಸುತ್ತಿದ್ದಳು.
ನನಗೆ ಚೆನ್ನಾಗಿ ನೆನಪಿದೆ… ಅದೊಂದು ಬಾರಿ ನಾನು ರಸ್ತೆಯಲ್ಲಿ ಹೋಗುವಾಗ ಮೆಹೆಂದಿ ಕಳೆದು ಹಾಕಿದ್ದೆ. ಚಿಕ್ಕಮ್ಮ ತನ್ನ ಮಕ್ಕಳಿಗೆ ಬಿಡಿಸಿ ಮಿಕ್ಕರೆ ನಿನಗೆ ಬಿಡಿಸುತ್ತೇನೆಂದು ಅಮ್ಮನ ಬಳಿ ಎಲ್ಲಾ ಕೆಲಸ ಮಾಡಿಸಿಕೊಂಡು ತನ್ನ ಮಕ್ಕಳ ಕೈಗೆ ಮೆಹೆಂದಿ ಸಾಲಲಿಲ್ಲವೆಂದು ಹೇಳಿ ನನಗೆ ಮೆಹೆಂದಿ ಹಾಕದೆ ಹಾಗೇ ಕಳಿಸಿದ್ದರು. ಮರುದಿನ ಬೇರೆ ಮಕ್ಕಳ ಕೈಯಲ್ಲಿ ಮೆಹೆಂದಿ ಮತ್ತು ನನ್ನ ಖಾಲಿ ಕೈ ನೋಡಿ ಅಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಅವತ್ತೇ ಕೊನೆ. ಮತ್ತೆ ಮೆಹೆಂದಿಗಾಗಿ ಯಾರ ಬಳಿಯು ಹೋಗುವುದಿಲ್ಲವೆಂದು ಶಪಥ ಮಾಡಿದೆ. ಇವತ್ತು ಅದೆಷ್ಟು ಮೆಹೆಂದಿ ಇದ್ದರೂ ಕೈಗೆ ಬಿಡಿಸಿಕೊಳ್ಳಲು ಇಷ್ಟವಿಲ್ಲ.
ಹಬ್ಬಕ್ಕೆ ಹೊಸ ಬಟ್ಟೆ ತರುತ್ತಾನೆಂದು ಕೆಲಸದಿಂದ ಬರುವ ದಾರಿಯನ್ನೇ ಕಾಯುತ್ತ ನಿಂತಾಗ ಅಪ್ಪ ದುಡ್ಡಿಲ್ಲದೆ ಖಾಲಿ ಕೈಲಿ ಬಂದು ಬಟ್ಟೆ ಅಂಗಡಿಗಳು ಮುಚ್ಚಿದ್ದವು ಮಗಳೇ ಎಂದು ಸುಳ್ಳು ಹೇಳಿದಾಗಿನಿಂದ ಹಬ್ಬಕ್ಕೆ ಹೊಸ ಬಟ್ಟೆಗಾಗಿ ಮನ ಬಯಸುವುದಿಲ್ಲ. ಹಬ್ಬಕ್ಕಾಗಿ ಹೊಸ ಬಟ್ಟೆ ಕೊಳ್ಳುವ ಖುಷಿಯೂ ಈಗಿಲ್ಲ. ಸೀಮೆಣ್ಣೆ ದೀಪದ ಬೆಳಕಲ್ಲಿ ಕಳೆದ, ಕಳೆಯುತ್ತಿದ್ದ ರಂಜಾನ್ ದಿನಗಳು ಅಲಾರಾಂ ಇಲ್ಲದೆಯೇ ಸೆಹರಿಗಾಗಿ ಏಳುತ್ತಿದ್ದ ದಿನಗಳ ಖುಷಿಯೂ ಈಗಿಲ್ಲ.
ಇಂದು ಎಲ್ಲವು ಯಾಂತ್ರಿಕ. ಹಬ್ಬದ ದಿನ ಗೆಳೆಯರ ಮನೆಗೆ ಹೋಗುವುದು, ಗೆಳೆಯರಿಗೆ ಹಬ್ಬದ ಶುಭಾಶಯ ಕೋರಲು ಊರು ಸುತ್ತುವ ಹಪಾಹಪಿ ಕಳೆದಿದೆ. ಗೆಳೆಯರು ಮತ್ತೆ ವಾಟ್ಸಾಪ್, ಮೆಸೆಂಜರ್ಗಳಲ್ಲಿ ಹಬ್ಬದ ಶುಭಾಶಯ ಕೋರಿದ್ದಾರೆ. ಅಪ್ಪ ಮತ್ತೆ ನಿಶಾಗಾಗಿ ಹೊಸ ಬಟ್ಟೆ ತಂದಿದ್ದಾರೆ. ಆದರೆ ಹಬ್ಬದ ಖುಷಿಯಂತು ಎಳ್ಳಷ್ಟೂ ಅವಳಲ್ಲಿಲ್ಲ.
ಹಬ್ಬ ಅಂದು ದುಡ್ಡಿಲ್ಲದಿದ್ದರೂ ಕಳೆಯುತ್ತಿತ್ತು. ಇಂದು ಹಬ್ಬವೆಂದರೆ ಹೊರೆ ಸಾಲ.
May 1, 2019
March 22, 2019
March 19, 2019
