ದಲಿತ ಅನ್ನುವುದು ಒಂದು ಚಿಂತನಾಕ್ರಮ
August 28, 2016
ಮಂಗಳೂರಿನಲ್ಲಿ dyfi, ಸಾಹಿತ್ಯ ಸಮುದಾಯ, ಪುಸ್ತಕ ಪ್ರಾಧಿಕಾರ ಜಂಟಿಯಾಗಿ ಹಮ್ಮಿಕೊಂಡಿರುವ ಕನ್ನಡ ಅತ್ಮಕತೆಗಳಲ್ಲಿ ದಲಿತ ಸಂವೇದನೆ" ಎರಡು ದಿನಗಳ ಕಮ್ಮಟ ಉದ್ಘಾಟಿಸಿ ಡಾ. ಅರವಿಂದ ಮಾಲಗತ್ತಿಯವರು ಆಡಿದ ಮಾತುಗಳ ಆಯ್ದ ಭಾಗಗಳು ಇಲ್ಲಿವೆ.

ಸಾಹಿತ್ಯ ವಲಯದಲ್ಲಿ ಕಾವ್ಯ ಕಮ್ಮಟಗಳು ನಡೆದಿವೆ. ಕಥಾ ಕಮ್ಮಟಗಳು ನಡೆದಿವೆ. ಕಾದಂಬರಿ ಕಮ್ಮಟಗಳು ನಡೆದಿವೆ. ನಾಟಕ ಕಮ್ಮಟಗಳು ನಡೆದಿವೆ. ವಿಮರ್ಶಾ ಕಮ್ಮಟಗಳೂ ನಡೆದಿವೆ. ಆದರೆ ಆತ್ಮಕಥೆಯ ಕಮ್ಮಟಗಳು ಈವರೆಗೆ ಎಲ್ಲಿಯೂ ನಡೆದಿಲ್ಲ. ಇದು ಹೊಸತು. ಕನ್ನಡದ ಆತ್ಮಕತೆಗಳು ಮತ್ತು ದಲಿತ ಆತ್ಮಕತೆಗಳು ಎರಡನ್ನೂ ಒಟ್ಟಿಗೆ ನೋಡುವ ಪರಿಕಲ್ಪನೆ ಇಲ್ಲಿದೆ. ದಲಿತರು ಅಂದರೆ ಊರಿಂದ ಹೊರಗೆ ಇಡಲ್ಪಟ್ಟವರು. ಊರ ಹೊರಗೆ ಹೊಲಗೇರಿ ನಿರ್ಮಾಣ ಮಾಡಿದ ಹಾಗೆ ಸಾಹಿತ್ಯ ಕ್ಷೇತ್ರದಲ್ಲೂ ಹೊಲಗೇರಿ ನಿರ್ಮಾಣ ಮಾಡಬೇಡಿ. ಅದು ಆರೋಗ್ಯಕರ ಲಕ್ಷಣ ಅಲ್ಲ.
ದಲಿತ ಮತ್ತು ಸಂವೇದನೆ ಪದಗಳ ವ್ಯಾಖ್ಯಾನ
ದಲಿತ ಅನ್ನುವ ಪದ ಯಾವುದೇ ಜನಾಂಗವನ್ನು ಸೂಚಿಸುವಂಥದ್ದು ಅಲ್ಲವೇ ಅಲ್ಲ. ದಲಿತ ಅನ್ನುವುದು ಒಂದು ಆಲೋಚನಾಕ್ರಮ. ನವೋದಯಕ್ಕೆ ಹೇಗೆ ಒಂದು ಚಿಂತನಾಕ್ರಮ ಇದೆಯೋ ಪ್ರಗತಿಪರ ಸಾಹಿತ್ಯಕ್ಕೆ ಹೇಗೆ ಒಂದು ಚಿಂತನಾಕ್ರಮ ಇದೆಯೋ ನವ್ಯಕ್ಕೆ ಹೇಗೆ ಒಂದು ಚಿಂತನಾಕ್ರಮ ಇದೆಯೋ ಹಾಗೆಯೇ ದಲಿತವೂ ಕೂಡ ಒಂದು ಆಲೋಚನಾಕ್ರಮವನ್ನು ಪ್ರತಿನಿಧಿಸುತ್ತದೆ ವಿನಃ ಯಾವುದೇ ಜಾತಿಯನ್ನು ಅಲ್ಲ.
ದಲಿತ ಅನ್ನುವ ಪದದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೆಲ್ಲರೂ ಸೇರಿಕೊಳ್ತಾರೆ. ಮಾರ್ಕ್ಸ್’ವಾದಿ ಚಿಂತನೆಯ ಪ್ರಕಾರ ಶೋಷಣೆಗೆ ಒಳಗಾದವರೆಲ್ಲ ದಲಿತರು. ಆಗ ದಲಿತರು ಅನ್ನಿಸಿಕೊಳ್ಳುವವರ ವ್ಯಾಪ್ತಿ ಇನ್ನೂ ದೊಡ್ಡದಾಗುತ್ತದೆ. ಲೋಹಿಯಾವಾದಿ ಚಿಂತನೆಯೂ ಇದನ್ನು ವ್ಯಾಖ್ಯಾನಿಸುತ್ತದೆ. ಅಂಬೇಡ್ಕರ್’ವಾದಿ ಚಿಂತನೆಯೂ ಇದನ್ನು ವ್ಯಾಖ್ಯಾನಿಸುತ್ತದೆ. ಹೀಗಾಗಿ ಕಾಲದಿಂದ ಕಾಲಕ್ಕೆ ದಲಿತ ಅನ್ನುವ ಪದದ ವ್ಯಾಖ್ಯಾನವೂ ಕೂಡ ಬದಲಾಗುತ್ತ ಬಂದಿದೆ.
ಈ ವ್ಯಾಖ್ಯಾನದ ಬದಲಾವಣೆ ಚಲನಶೀಲತೆಯನ್ನ ಸೂಚಿಸುತ್ತದೆ. ಇದು ಸಾಹಿತ್ಯದ ಚಲನಶೀಲತೆಯೂ ಹೌದು, ಸಮಾಜದ ಚಲನಶೀಲತೆಯೂ ಹೌದು. ಇನ್ನು, ಸಂವೇದನಾಶೀಲತೆ ಅಂದರೇನು? ಯಾವುದೇ ಸಮಾಜದ ಅನುಭವಕ್ಕೆ ಸ್ಪಂದಿಸಬಲ್ಲ ಸಾಮರ್ಥ್ಯವೇ ಸಂವೇದನೆ. ಅದು ಯಾವುದೇ ಸಮಾಜ ಇರಬಹುದು. ನಮ್ಮ ದೇಶದಲ್ಲಿ ಜಾತಿ, ಮತ, ಪಂಗಡ, ಜನಾಂಗಗಳು, ವರ್ಣ ವ್ಯವಸ್ಥೆ ಹೀಗೆ ಹಲವಾರು ಕಂಪಾರ್ಟ್ಮೆಂಟ್’ಗಳಿವೆ. ಹೀಗಾಗಿ ನಮ್ಮ ದೇಶದಲ್ಲಿ ಸಂವೇದನೆ ಅನ್ನುವ ಪದಕ್ಕೆ ಎಲ್ಲಿಲ್ಲದ ಮಹತ್ವ ಇದೆ. ಸಂವೇದನೆ ಈ ಕಂಪಾರ್ಟ್ಮೆಂಟ್’ಗಳನ್ನು ಒಡೆಯುತ್ತದೆ. ಒಂದರಿಂದ ಇನ್ನೊಂದು ಕಂಪಾರ್ಟ್ಮೆಂಟ್’ಗೆ ಜಿಗಿಯುತ್ತದೆ. ಒಂದು ಜಾತಿಯಿಂದ ಇನ್ನೊಂದಕ್ಕೆ, ಒಂದು ಮತದಿಂದ ಇನ್ನೊಂದಕ್ಕೆ, ಒಂದು ಧರ್ಮದಿಂದ ಇನ್ನೊಂದಕ್ಕೆ ಸ್ಪಂದಿಸುವುದು, ಒಡನಾಡುವುದು, ಬೆರೆಯುವುದು – ಇದು ಸಂವೇದನೆ. ಸಂವೇದನೆ ಸಂಚಲನ ರೂಪದ್ದು. ಅದು ಪರೋಕ್ಷವಾಗಿ ಅನುಭವ ಮತ್ತು ಅಭಿವ್ಯಕ್ತಿಯ ಮೌಲ್ಯಮಾಪನ ಮಾಡುವ ಪ್ರಕ್ರಿಯೆಗೆ ಸಹಾಯಕವಾಗುವ ಮಾಧ್ಯಮ.
ನವ್ಯದ ಸಂವೇದನೆಯ ಪರಿಕಲ್ಪನೆಗೂ ದಲಿತ ಬಂಡಾಯದ ಸಂವೇದನೆಯ ಪರಿಕಲ್ಪನೆಗೂ ಅಜಗಜಾಂತರವಿದೆ. ನವ್ಯದ ಪರಿಕಲ್ಪನೆ ವ್ಯಕ್ತಿಕೇಂದ್ರಿತ. ದಲಿತ ಬಂಡಾಯದಲ್ಲಿ ಅದು ಸಮಷ್ಟಿಯ ಪರಿಕಲ್ಪನೆ. ನಮ್ಮಲ್ಲಿ ಸಂವೇದನೆಯ ವಿಷಯ ಬಂದಾಗ ಅಲ್ಲಿ ಜಾತಿ, ಮತ, ಪಂಥ, ಕುಲ – ಇವೆಲ್ಲವೂ ಒಳಗೊಳ್ಳುತ್ತವೆ. ಆದರೆ ಭಾರತದಲ್ಲಿ ನಮ್ಮ ಆಲೋಚನಾ ಕ್ರಮ, ನಮ್ಮ ಓದಿನ ಕ್ರಮವೇ ಬೇರೆ. ಆದ್ದರಿಂದ ಇಲ್ಲಿ ದಲಿತ ಸಂವೇದನೆ, ಇಸ್ಲಾಂ ಸಂವೇದನೆ, ಮಹಿಳಾ ಸಂವೇದನೆ ಮೊದಲಾದವು ಇವೆ. ಅಷ್ಟೇ ಅಲ್ಲ, ಗ್ರಾಮೀಣ ಸಂವೇದನೆ, ಭಾಷಾ ಸಂವೇದನೆ, ನಗರ ಸಂವೇದನೆ ಮೊದಲಾದವುಗಳೂ ಇವೆ. ಹೀಗೆ ಹೊಸತಾಗಿ ಯಾವುದೆಲ್ಲ ಬಂದು ಸೇರಿಕೊಳ್ಳುತ್ತದೆಯೋ ಆಗೆಲ್ಲ ಸಂವೇದನೆಯ ವ್ಯಾಪ್ತಿ ಹೆಚ್ಚುತ್ತ ಹೋಗುತ್ತದೆ. ಪರಿಕಲ್ಪನೆಯಲ್ಲಿ ಬದಲಾವಣೆಯಾಗುತ್ತದೆ. ಸೀಮಿತತೆಯಲ್ಲಿ ಬದಲಾವಣೆಯಾಗುತ್ತದೆ. ಮನುಷ್ಯ ಜಾತಿ ತಾವೆಲ್ಲಾ ಒಂದೇ ಅನ್ನುವ ಭಾವನೆಯನ್ನು ಈ ಸಂವೇದನೆ ಉಂಟುಮಾಡುತ್ತದೆ.
ಎಲ್ಲಿ ಸಂವೇದನಾರಹಿತ ಬದುಕು ಇದೆಯೋ ಅಲ್ಲಿ ಅಸಹಿಷ್ಣುತೆಯ ಬದುಕಿದೆ. ಆದ್ದರಿಂದ ಇಂದಿನ ಕಾಲಘಟ್ಟಕ್ಕೆ ಸಂವೇದನೆಯ ಪರಿಭಾಷೆ ಅತ್ಯಂತ ಔಚಿತ್ಯಪೂರ್ಣವಾಗಿದೆ ಮತ್ತು ಸಕಾರಾತ್ಮಕವಾಗಿದೆ.
ದಲಿತ ಆತ್ಮಕಥನಗಳ ಕೊಡುಗೆ
ನಮ್ಮ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಆತ್ಮಕತೆಗಳಿವೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಆತ್ಮಕತೆಗಳಿಗೆ ಬಹಿಷ್ಕಾರ ಹಾಕಲಾಗಿದೆ. ಯಾಕೆ ಹೀಗೆ?ಅವು ಯಾಕೆ ಸಾಹಿತ್ಯಕ ಅಧ್ಯಯನಕ್ಕೆ ಯೋಗ್ಯವಲ್ಲ? ಆತ್ಮಕತೆಗಳ ಅಂತಃಸತ್ವವನ್ನು ಗುರುತಿಸಿದರೆ ನಮಗೆ ಅದರ ಮೌಲ್ಯ ಗೊತ್ತಾಗುತ್ತದೆ.
ಮೊದಲೆಲ್ಲ ಸ್ವಪ್ರತಿಷ್ಟೆಯನ್ನು ಪ್ರತಿಪಾದಿಸುವುದೇ ಆತ್ಮಕತೆ ಎನ್ನಲಾಗುತ್ತಿತ್ತು ನಾನೆಷ್ಟು ಆದರ್ಶಮಯ ಬದುಕನ್ನು ಕಳೆದೆ? ನನ್ನ ಮನೆತನ ಎಷ್ಟು ಪ್ರತಿಷ್ಠಿತವಾಗಿತ್ತು? ನನ್ನ ಸಾಧನೆಯ ಹಾದಿ ಹೇಗಿತ್ತು? ಇತ್ಯಾದಿಗಳನ್ನು ಹೇಳಿಕೊಳ್ಳುವ ಸ್ವಪ್ರಶಂಸೆಯ ಬರಹಗಳೇ ಆತ್ಮಕಥೆಗಳಾಗಿದ್ದವು. ಆದರೆ ದಲಿತ ಬಂಡಾಯದ ಕಾಲದಲ್ಲಿ ಇದು ಸಂಪೂರ್ಣ ಬದಲಾಯ್ತು. ಆತ್ಮಪ್ರತಿಷ್ಟೆಯ ಹುಡುಕಾಟ ಅಲ್ಲಿತ್ತು. ಸ್ವಪ್ರತಿಷ್ಟೆಯನ್ನು ವಿರೋಧ ಮಾಡುವುದೇ ದಲಿತ ಬಂಡಾಯದ ಮೂಲಸತ್ವವಾಯ್ತು. ಹೀಗಾಗಿ ಆತ್ಮಕಥೆಗಳು ಕೂಡ ಅಧ್ಯಯನ ಯೋಗ್ಯ, ಅಭ್ಯಾಸಯೋಗ್ಯ ಎನ್ನುವ ಆಲೋಚನಾಕ್ರಮ ಜೊತೆಗೂಡಿತು. ದಲಿತ ಆತ್ಮಕಥನಗಳು ಆತ್ಮಕಥನ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಕೊಡುಗೆ ಇದು. ಪರಿಕಲ್ಪನೆಯನ್ನು ಒಡೆದು ಕಟ್ಟುವ ಕ್ರಿಯೆ – ಇದು ದಲಿತ ಆತ್ಮಕಥನ ಪರಂಪರೆಯ ವೈಶಿಷ್ಟ್ಯವಾಯ್ತು.
ಜಾತಿ ಅನ್ನುವುದು ಕೇವಲ ಮನುಷ್ಯರಿಗಲ್ಲ. ತಳ ಸಮುದಾಯದವರು ಸಾಕುವ ಪ್ರಾಣಿಪಕ್ಷಿಗಳಿಗೂ ಅದನ್ನು ಅನ್ವಯಿಸಲಾಗುತ್ತದೆ. ಮೇಲ್ಜಾತಿಯವರು ಸಾಕಿದ ಕೋಣವನ್ನು ಕೆಳಜಾತಿಯವರು ಸಾಕುವ ಎಮ್ಮೆಯೊಂದಿಗೆ ಬೆರೆಯಲಿಕ್ಕೆ ಬಿಡುವುದಿಲ್ಲ. ಅಸ್ಪೃಶ್ಯನೊಬ್ಬ ಅಪ್ಪಿತಪ್ಪಿ ಮೇಲ್ಜಾತಿಯವನ ತಟ್ಟೆ ಮುಟ್ಟಿದರೆ, ಅದು ಲೋಹದ್ದಾಗಿದ್ದರೆ, ಅದಕ್ಕೆ ಸೆಗಣಿ ಬಳಿದು, ಸುಟ್ಟು, ನಂತರ ಗೋಮೂತ್ರದಲ್ಲಿ ಅದ್ದಿ ಮನೆಯೊಳಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಂದರೆ ಗೋಮೂತ್ರಕ್ಕಿಂತಲೂ ಅಸ್ಪೃಶ್ಯನ ಸ್ಪರ್ಶ ಕಡೆ ಎಂಬ ಚಿಂತನೆ. ಜಾತಿ ವ್ಯವಸ್ಥೆಯ ಈ ಅನುಭವಗಳನ್ನು ಬರಹದ ಮೂಲಕ ದಲಿತ ಸಮುದಾಯ ಹೊರಗೆ ತಂದಿದೆ.
ಕೆಲವು ಪ್ರಗತಿಪರ ಸ್ನೇಹಿತರು ಕುಡಿಯುವುದು – ತಿನ್ನುವುದೇ ಬಂಡಾಯ ಅಂದುಕೊಂಡಿದ್ದಾರೆ. ಒಬ್ಬ ದಲಿತನಿಗೆ ತಿನ್ನುವುದನ್ನು ಬಿಡುವುದು ಬಂಡಾಯವಾದರೆ, ಕುಡಿಯುವುದನ್ನ ಬಿಡುವುದು ಬಂಡಾಯವಾದರೆ; ಒಬ್ಬ ಪ್ರಗತಿಪರನಿಗೆ ತಿನ್ನುವುದು, ಕುಡಿಯುವುದೇ ಬಂಡಾಯ. ದಲಿತ ಬಂಡಾಯದ ಕಾಲವೇನಿದೆ, ಅದು ಅತ್ಯಂತ ಸಮೃದ್ಧಿಯ ಕಾಲ. ಸಸ್ಯಾಹಾರಿಯಾದ ಆನೆ ಮಾಂಸಾಹಾರಿಯಾಗಲು ಮತ್ತು ಮಾಂಸಾಹಾರಿಯಾದ ಹುಲಿ ಸಸ್ಯಾಹಾರಿಯಾಗಲು ಪ್ರಯತ್ನಪಟ್ಟ ಕಾಲ. ಮನುಷ್ಯ ಸಂಸ್ಕೃತಿಗಳೊಳಗೆ ಯುದ್ಧ. ಹೀಗಿದ್ದಾಗಲೇ ಮನುಷ್ಯ ಸಂಸ್ಕೃತಿಗಳು ಜಿಗಿಯುತ್ತವೆ. ಈ ಜಿಗಿತದ ಚಲನೆಯಲ್ಲೇ ಸಮಾಜದ ಅಭಿವೃದ್ಧಿ ಇದೆ. ದೇಶದ ಅಭಿವೃದ್ಧಿ ಇದೆ. ಮನುಷ್ಯತ್ವದ ಅಭಿವೃದ್ಧಿ ಇದೆ. ಸಂವಿಧಾನದ ಶಕ್ತಿ ಇದೆ. ಆದ್ದರಿಂದ ಈ ವಿರೋಧಾಭಾಸಗಳ ಚಿಂತನೆಗೆ, ಚರ್ಚೆಗೆ ಇದು ಸಕಾಲ.
ಕನ್ನಡದಲ್ಲಿ ದಲಿತ ಆತ್ಮಕಥೆಗಳ ಸ್ವರೂಪ
ಮರಾಠಿ ಭಾಷೆಯಲ್ಲಿ ದಲಿತ ಸಮುದಾಯದವರ ಹಲವಾರು ಆತ್ಮಕಥೆಗಳು ಬಂದಿವೆ. ನಮ್ಮ ಕನ್ನಡದ ಆತ್ಮಕಥೆಯ ವಿಮರ್ಶಕರು ಅಂಧತೆಯ ವಿಮರ್ಶಕರೇ ವಿನಃ ಸ್ವತಂತ್ರ ವಿಮರ್ಶಕರಲ್ಲ ಅನ್ನಿಸುತ್ತದೆ. ಯಾಕೆ ಹಾಗನ್ನಿಸುತ್ತದೆ? ಮರಾಠಿ ಆತ್ಮಕಥೆಗಳ ಸಂರಚನೆಯೇ ಬೇರೆ, ಕನ್ನಡದ ಆತ್ಮಕಥೆಗಳ ಸಂರಚನೆಯೇ ಬೇರೆ. ಅವುಗಳ ಗುರುತಿಸುವಿಕೆಯೇ ಬೇರೆ.
ಮರಾಠಿ ಆತ್ಮಕಥೆಗಳು ಕಾದಂಬರಿಯ ಮಾದರಿಯಲ್ಲಿ ರಚನೆಗೊಂಡಿರುವುದೇ ಹೆಚ್ಚು. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬಿಡಿಸಲಾಗದ ಸಂಬಂಧವನ್ನ ಇಟ್ಟು ಬೆಳೆಯುತ್ತಾ ಹೋಗುತ್ತವೆ. ಆದರೆ ಕನ್ನಡದ ಯಾವುದೇ ಆತ್ಮಕತೆಯನ್ನು ತೆಗೆದುಕೊಂಡರೆ, ಯಾವುದೂ ಕೂಡ ಕಾದಂಬರಿಯ ಮಾದರಿಯಲ್ಲಿ ಇಲ್ಲ. ಅವೆಲ್ಲವೂ ಕೂಡ ಘಟನೆ ಮತ್ತು ಅನುಭವಗಳು ಬಿಡಿಬಿಡಿಯಾಗಿ ಸಂಕಲನಗೊಂಡಂತಿವೆ.
ಆತ್ಮಚರಿತ್ರೆ ಬೇರೆ, ಆತ್ಮಕತೆ ಬೇರೆ. ನಾನು ಗೌರ್ಮೆಂಟ್ ಬ್ರಾಹ್ಮಣ ಬರೆದು ದಶಕಗಳು ಕಳೆದಿವೆ. ಆತ್ಮಚರಿತ್ರೆಯಲ್ಲಿ ಹುಟ್ಟಿನಿಂದ ಹಿಡಿದು ಕೊನೆಯವರೆಗಿನ ಬದುಕಿನ ವಿವರಗಳು ಇರುತ್ತವೆ. ಆದರೆ ಗೌರ್ಮೆಂಟ್ ಬ್ರಾಹ್ಮಣ ನನ್ನ ಯೌವನದ ಹಂತಕ್ಕೇ ಕೊನೆಗೊಂಡಿದೆ. ಅದು ಅಪೂರ್ಣ. ಆದ್ದರಿಂದ ನಾನದನ್ನು ಆತ್ಮಕತೆ ಎಂದು ಕರೆದೆ. ಅದಕ್ಕಿಂತ ಹಿಂದೆ ಆತ್ಮಕತೆಗಳನ್ನೂ ಆತ್ಮಚರಿತ್ರೆ ಎಂದೇ ಕರೆಯಲಾಗ್ತಿತ್ತು.
ಕನ್ನಡದಲ್ಲಿ ಇಪ್ಪತ್ತಕ್ಕೂ ಹೆಚ್ಚು ದಲಿತ ಆತ್ಮಕತೆಗಳು ಬಂದಿವೆ. ಅದರಲ್ಲಿ ಮೂರು ಮಹಿಳಾ ಆತ್ಮಕತೆಗಳಿವೆ. ಅವುಗಳಲ್ಲಿ ಒಂದು ಶೈಲಜಾ ಅವರದ್ದು, ಮತ್ತೊಂದು ಸಮತಾ ದೇಶಮಾನೆ ಅವರದ್ದು, ಇನ್ನೊಂದು ದು.ಸರಸ್ವತಿ ಅವರದ್ದು. ಇವುಗಳಲ್ಲಿ ನನಗೆ ಶೈಲಜಾ ಅವರ ಆತ್ಮಕಥನ ಬಹಳ ಇಷ್ಟವಾಯ್ತು. ದಲಿತ ಅಲ್ಲದ ಹೆಣ್ಣು ದಲಿತನನ್ನು ಮದುವೆಯಾದರೆ ಎಂಥ ಪಾಡು ಪಡ್ತಾಳೆ ಅನ್ನೋದು ಅದರಲ್ಲಿದೆ. ಮರಾಠಿಯಲ್ಲಿ ಇಂಥವು ಬಂದಿವೆ. ಕನ್ನಡದಲ್ಲಿ ಅಪರೂಪ.
ಆತ್ಮಕಥೆಗಳು ಸಮಾಜವನ್ನು ಬೆಸೆಯುವುದರ ಜೊತೆಗೆ ಸಮಾಜವನ್ನು ಪರೋಕ್ಷವಾಗಿ ಮುರಿಯುವುದಕ್ಕೂ ಕಾರಣವಾಗುತ್ತದೆ ಅನ್ನುವ ಎಚ್ಚರ ಬರಹಗಾರನಿಗೂ ಇರಬೇಕು, ವಿಮರ್ಶಕನಿಗೂ ಇರಬೇಕು. ಅದು ಇಲ್ಲದೆ ಹೋದರೆ ನಾವು ಅಖಂಡತ್ವದ ಸಮಾಜವನ್ನು ಅಥವಾ ಅಖಂಡತ್ವದ ದೇಶೀ ಪರಿಭಾಷೆಯನ್ನು ಕಟ್ಟಲು ಸಾಧ್ಯವಿಲ್ಲ.
ಇಂಡಿಯಾ ಪೂರ್ಣವಾಗಿ ಸ್ವತಂತ್ರಗೊಂಡಿಲ್ಲ
ಇಂದು ರಾಷ್ಟ್ರಭಕ್ತಿಯ ಪರಿಭಾಷೆ ಬದಲಾಗಿದೆ. ಇವತ್ತು ಗೋರಕ್ಷಣೆ ಕೂಡ ರಾಷ್ಟ್ರೀಯತೆಯ ಭಾಗವಾಗಿದೆ. ಪ್ರಧಾನಮಂತ್ರಿಗಳು ನಕಲಿ ಗೋರಕ್ಷಕರನ್ನು ಶಿಕ್ಷಿಸಿ ಅನ್ನುವ ಮೂಲಕ ಅಸಲಿ ಗೋರಕ್ಷಕರು ಎನ್ನುವ ಇನ್ನೊಂದು ಗುಂಪನ್ನು ಸೃಷ್ಟಿಸಿ ಅದನ್ನು ಬೆಂಬಲಿಸುತ್ತಾರೆ. ಗೋರಕ್ಷಣಾ ಸಿದ್ಧಾಂತವನ್ನು ಮೀರುವ ಕೆಲಸ ಅವರು ಮಾಡುವುದಿಲ್ಲ. ಮನುಷ್ಯರಲ್ಲಿ ಸಮಾನತೆ ಕಾಣುವ ಮಾತಾಡುವವರು ಪ್ರಾಣಿಗಳೆಲ್ಲವೂ ಒಂದೇ ಅನ್ನುವ, ಅವನ್ನು ಸಮಾನವಾಗಿ ಕಾಣುವ ದೃಷ್ಟಿಕೋನವನ್ನೆ ಬೆಳೆಸಿಕೊಂಡಿಲ್ಲ. ಗೋವನ್ನು ಎತ್ತರಕ್ಕಿಟ್ಟು ಅದರ ರಕ್ಷಣೆಯ ರಾಜಕೀಯಕ್ಕೆ ಪ್ರಧಾನಿಯೇ ಕುಮ್ಮಕ್ಕು ನೀಡುತ್ತಿದ್ದಾರೆ.
ಕುವೆಂಪು ಹೇಳುತ್ತಾರೆ, ಗೋವನ್ನ ಸಾಕದೆ ಇರುವವನಿಗೆ ಗೋವಿನ ಬಗ್ಗೆ ಮಾತಾಡುವ ಹಕ್ಕಿಲ್ಲ. ಗೋವನ್ನ ಸಾಕುವವರು ರೈತರು. ಅದರ ಹಕ್ಕನ್ನು ಅವರಿಗೆ ಬಿಟ್ಟುಬಿಡಿ ಎಂದು. ಇದು ತುರ್ತಾಗಿ ಆಗಬೇಕಿದೆ.
ಅಂಬೇಡ್ಕರ್ ಹೇಳುತ್ತಾರೆ, ನನ್ನ ಮೊದಲ ಪ್ರೀತಿ ನನ್ನ ದೇಶ, ನನ್ನ ಕೊನೆಯ ಪ್ರೀತಿಯೂ ನನ್ನ ದೇಶ ಎಂದು. ದಲಿತರು ನಿಜದಲ್ಲಿ ದೇಶಭಕ್ತರು. ಆದರೆ ಅದನ್ನು ಹೇಳಿಕೊಳ್ಳಲು ಅವರಲ್ಲಿ ಬಾಯಿ ಇಲ್ಲ. ಶತಮಾನಗಳಿಂದ ಅವರ ಮಾತುಗಳನ್ನು ಕಸಿದಿಟ್ಟುಕೊಳ್ಳಲಾಗಿದೆ.
ಸ್ವಾತಂತ್ರ್ಯದ ವಿಷಯವಾಗಿ ನಮ್ಮ ದೇಶದ ನಾಯಕರು ಒಬ್ಬೊಬ್ಬರು ಒಂದೊಂದು ಕಲ್ಪನೆ ಇಟ್ಟುಕೊಂಡಿದ್ದರು. ವಿವೇಕಾನಂದರು ಸಾತ್ವಿಕ ಭಾರತ ಕಟ್ಟಬೇಕು ಅನ್ನುತ್ತಿದ್ದರು. ನೆಹರೂ ಆರ್ಥಿಕ ಭಾರತವನ್ನು ಕಟ್ಟಬೇಕು ಅನ್ನುತ್ತಿದ್ದರು. ಲೋಹಿಯಾ ಗ್ರಾಮ ಹಾಗೂ ನಗರ ಭಾರತದ ಸಮ್ಮಿಶ್ರಣವನ್ನ ಕಟ್ಟಬೇಕು ಅನ್ನುತ್ತಿದ್ದರು. ಗಾಂಧಿ ರಾಮರಾಜ್ಯವನ್ನು ಕಟ್ಟಬೇಕು ಅಂತ ಹೇಳ್ತಾ ಇದ್ದರು. ಅಂಬೇಡ್ಕರ್ ಜಾತಿರಹಿತ ವರ್ಣಭೇದರಹಿತ ಭಾರತವನ್ನು ಕಟ್ಟಬೇಕು ಅನ್ನುತ್ತಿದ್ದರು. ನನ್ನಪ್ಪ, ಭಾರತಕ್ಕೆ ಸ್ವಾತಂತ್ರ್ಯ ಬಂದರೆ ಬಾವಿಗಳಿಗೆ ಸಲೀಸಾಗಿ ಹೋಗಿ ನೀರು ಸೇದಿಕೊಂಡು ಕುಡಿಯಬಹುದು ಅಂದುಕೊಂಡಿದ್ದ!
ಕೊನೆಗೂ ಸ್ವಾತಂತ್ರ್ಯ ಬಂದಾಗ ಇಂದಿನಿಂದ ಊರಿನ ಎಲ್ಲಾ ಬಾವಿಗಳ ನೀರು ಸೇದಲು ತಾನು ಸ್ವತಂತ್ರ ಎಂದು ನನ್ನಪ್ಪ ಭಾವಿಸಿದ. ನೀರು ಸೇದುವಾಗ ಯಾರೂ ತಮ್ಮನ್ನು ತಡೆಯಲಾರರು ಅಂದುಕೊಂಡಿದ್ದ. ಹಾಗೆಯೇ ಸ್ವಾತಂತ್ರ್ಯ ಘೋಷಣೆಯಾದ ದಿನ ಊರಿನ ಬಹುತೇಕ ಬಾವಿಕಟ್ಟೆಗಳಿಗೆ ಹೋಗಿ ನೀರು ಮೊಗಮೊಗೆದು ಸೇದಿದ್ದ, ಅಲ್ಲೇ ಚೆಲ್ಲಿದ್ದ. ಅವನ ಸ್ವಾತಂತ್ರದ ಖಷಿಗೆ ಮಿತಿಯಿರಲಿಲ್ಲ. ತನಗೆ ಸ್ವಾತಂತ್ರ್ಯ ದೊರೆತಿದೆ! ತಾನು ಯಾವ ಬಾವಿಯನ್ನಾದರೂ ಮುಟ್ಟಬಹುದು! ಎಲ್ಲಿಂದಲಾದರೂ ನೀರು ಪಡೆಯಬಹುದು!! ಅನ್ನೋದು ಅವನ ಸಂಭ್ರಮದ ಕಾರಣವಾಗಿತ್ತು. ಆದರೆ ಆ ಸ್ವಾತಂತ್ರ್ಯ ಒಂದೇ ದಿನಕ್ಕೆ ಮುಗಿದುಹೋಯ್ತು. ಮಾರನೇ ದಿನ, “ಬರಲಿ ಅವನು ಹೊಲೆಯ ನೀರು ಸೇದಲು , ಕಾಲು ಮುರಿಯುತ್ತೇವೆ" ಎಂದು ಊರಿನ ಸವರ್ಣೀಯರು ಬಡಿಗೆ ಹಿಡಿದು ಕಾದು ಕೂತಿದ್ದರು.
ಇದು ಇಂಡಿಯಾಗೆ ಸಿಕ್ಕಿದ ಸ್ವಾತಂತ್ರ, ಇದು ದಲಿತರಿಗೆ ಸಿಕ್ಕಿದ ಸ್ವಾತಂತ್ರ, ಶೋಷಿತರಿಗೆ ದೊರಕಿದ ಸ್ವಾತಂತ್ರ. ಇದು ನಮ್ಮ ಪ್ರಜಾಪ್ರಭುತ್ವ. ಈ ಸಮುದಾಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆಯದ ಹೊರತು ಇಂಡಿಯಾ ಸಂಪೂರ್ಣವಾಗಿ ಸ್ವತಂತ್ರಗೊಂಡಂತೆ ಆಗುವುದಿಲ್ಲ. ಹಾಗೆ ಪೂರ್ಣ ಸ್ವತಂತ್ರಗೊಳ್ಳುವ ದಿನ ಬೇಗ ಬರಲಿ ಅನ್ನೋದು ನನ್ನ ಆಶಯ.
May 1, 2019
March 22, 2019
March 19, 2019
