ಕುರುಡು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಸೇನಾ ಜವಾನ
August 9, 2016
ಅಷ್ಟಾದರೂ ಶನಿವಾರ ರಾತ್ರಿಯವರೆಗೆ ಆರೋಪಿಯನ್ನು ಬಂಧಿಸಿರಲಿಲ್ಲ. ಪೋಷಕರು ಹಾಗೂ ಸಮುದಾಯದ ಒತ್ತಡ ಮತ್ತು ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಕೊನೆಗೂ ಆರೋಪಿಯ ಬಂಧನವಾಗಿದೆ.

ಕಳೆದ 15 ವರ್ಷಗಳಲ್ಲಿ ಇಂಡಿಯಾದಲ್ಲಿ ಅತ್ಯಾಚಾರ ಪ್ರಕರಣಗಳು 15%ರಷ್ಟು ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲಿನ ಅತ್ಯಾಚಾರ ಸಂಖ್ಯೆಗಳು ಅಸಹ್ಯವಾಗಿ ಏರಿಕೆ ಕಂಡಿವೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ, ಆಗಸ್ಟ್ 5ರ ಶುಕ್ರವಾರ ನಡೆದ ದಲಿತ - ಕುರುಡು ಬಾಲಕಿಯ ಮೇಲೆ ಸೇನಾ ಜವಾನನೊಬ್ಬ ನಡೆಸಿದ ಅತ್ಯಾಚಾರ.
ಮಥುರಾ ಜಿಲ್ಲೆಯ ರಾಮ್ ಕಾ ನಾಗ್ಲಾ ಎಂಬ ಹಳ್ಳಿಗೆ ರಜೆ ನಿಮಿತ್ತ ಬಂದಿದ್ದ ಜಾಟ್ ರೆಜಿಮೆಂಟ್’ಗೆ ಸೇರಿದ ಜವಾನ ಅಜೀತ್ ಸಿಂಗ್ (30ವ) ಈ ದುಷ್ಕೃತ್ಯ ಎಸಗಿದ್ದಾನೆ. ಈತನ ಮೇಲೆ ವಿವಿಧ ಸೆಕ್ಷನ್’ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಮಥುರಾ ಪೊಲೀಸರು, ಬಂಧನದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ತನ್ನ ಪರಿಚಿತರಾದ ಬಾಲಕಿಯ ಮನೆಗೆ ತೆರಳಿದ್ದ ಅಜೀತ್ ಸಿಂಗ್, ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ. ಆಕೆಯ ತಂದೆ ಜರೂರು ಕೆಲಸದ ನಿಮಿತ್ತ ಹೊರಗೆ ಹೋದಾಗ ಈತ ಹುಡುಗಿಯನ್ನು ಚಾವಣಿಗೆ ಕರೆದೊಯ್ದು ಅತ್ಯಾಚಾರ ನಡೆಸಿದನೆಂದು ಬಾಲಕಿ ಮತ್ತು ಪೋಷಕರು ದೂರು ನೀಡಿದ್ದಾರೆ.
ಪ್ರಕರಣ ನಡೆದಾಗ ಬಾಲಕಿಯ ಕುಟುಂಬದವರು ಸಮೀಪದ ನೌಝೀಲ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು. ಆದರೆ ಅಲ್ಲಿಯ ಪೊಲೀಸರು ರೇಪ್ ಕೇಸ್ ದಾಖಲಿಸಿಕೊಳ್ಳಲು ನಿರಾಕರಿಸಿ, ಜವಾನನ ಮೇಲೆ ‘ಚುಡಾಯಿಸಿದ’ನೆಂದು ದೂರು ಬರೆಯುವಂತೆ ಸೂಚಿಸಿದ್ದರು. ಪೋಷಕರ ಸತತ ಒತ್ತಾಯದ ನಂತರವಷ್ಟೇ ಅತ್ಯಾಚಾರ ಪ್ರಕರಣ ದಾಖಲಿಸಲಾಯ್ತು. ಅಷ್ಟಾದರೂ ಶನಿವಾರ ರಾತ್ರಿಯವರೆಗೆ ಆರೋಪಿಯನ್ನು ಬಂಧಿಸಿರಲಿಲ್ಲ. ಪೋಷಕರು ಹಾಗೂ ಸಮುದಾಯದ ಒತ್ತಡ ಮತ್ತು ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಕೊನೆಗೂ ಆರೋಪಿಯ ಬಂಧನವಾಗಿದೆ.
ಮಂತ್ ತಾಲ್ಲೂಕಿನ ವಿಧಾನಸಭಾ ಸದಸ್ಯ ಶ್ಯಾಮ ಸುಂದರ ಶರ್ಮ ಬಾಲಕಿ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.
ಇತ್ತ ಬುಲಂದ್ ಶೆಹರ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳ ಬಂಧನವಾಗಿರುವ ಸುದ್ದಿ ಬಂದಿದೆ. ಅದೇನಿದ್ದರೂ, ಎಲ್ಲಿಯವರೆಗೆ ಈ ದುಷ್ಕೃತ್ಯಕ್ಕೆ ಕಠಿಣ ಶಿಕ್ಷೆ ಜಾರಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ಪಿಡುಗನ್ನು ತಹಬಂದಿಗೆ ತರುವುದು ಕಷ್ಟ ಅನ್ನುವ ಮಾತುಗಳು ಕೇಳಿಬರುತ್ತಿವೆ.
May 1, 2019
March 22, 2019
March 19, 2019
