ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದೆಹಲಿ ಬಾಲಕಿ ಸಾವು
July 25, 2016

ಅದೆಷ್ಟು ಹೆಣ್ಣುಮಕ್ಕಳ ಹೆಣಗಳು ಉರುಳುತ್ತಿದ್ದರೂ ಪುರುಷಪ್ರಧಾನ ಕಾನೂನು ವ್ಯವಸ್ಥೆ ಅತ್ಯಾಚಾರಕ್ಕೆ ಕಠಿಣ ಹಾಗೂ ರಾಜಿಯಿಲ್ಲದ ಶಿಕ್ಷೆ ಜಾರಿಗೊಳಿಸಲು ಇನ್ನೂ ಮೀನಮೇಷ ಎಣಿಸುತ್ತ ಕುಳಿತಿದೆ.
ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದೆಹಲಿಯ ದಲಿತ ಬಾಲಕಿ ನೆನ್ನೆ ಸಾವನ್ನಪ್ಪಿದ್ದಾಳೆ. ಎರಡು ತಿಂಗಳ ಅವಧಿಯಲ್ಲಿ ಪದೇ ಪದೇ ಅಪಹರಿಸಿ ಒತ್ತೆಯಾಗಿಟ್ಟುಕೊಂಡು ಅತ್ಯಾಚಾರವೆಸಗಿದ್ದ ದುಷ್ಕರ್ಮಿಗಳು ಬಾಲಕಿಗೆ ಆಸಿಡ್’ನಂಥ ದ್ರವವನ್ನು ಕುಡಿಸಿದ್ದರು. ಸಾಮೂಹಿಕ ಅತ್ಯಾಚಾರದ ಫಲವಾಗಿ ದೈಹಿಕವಾಗಿ ತೀವ್ರ ಗಾಯಗೊಂಡಿದ್ದ ಬಾಲಕಿ ಆಸಿಡ್’ನಿಂದಾಗಿ ದಿನವೂ ರಕ್ತ ವಾಂತಿ ಮಾಡಿಕೊಳ್ಳುತ್ತ ದಾರುಣಾವಸ್ಥೆ ತಲುಪಿದ್ದಳು.
ಆಸ್ಪತ್ರೆಯೊಂದರಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿರುವ ಬಾಲಕಿಯ ತಂದೆ ಈ ಹಿಂದೆ ತನ್ನ ಮಗಳ ಮೇಲಾದ ಅತ್ಯಾಚಾರದ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜುಲೈ 15ರಂದು ವಿವಿಧ ಮಾಧ್ಯಮ ವರದಿಗಳನ್ನು ಆಧರಿಸಿ ದೆಹಲಿ ಮಹಿಳಾ ಆಯೋಗವು ಬಾಲಕಿಯನ್ನು ಲೋಕನಾಯಕ ಜೈಪ್ರಕಾಶ್ ಆಸ್ಪತ್ರೆಯಿಂದ ಮ್ಯಾಕ್ಸ್ ಹಾಸ್ಪಿಟಲ್’ಗೆ ವರ್ಗಾಯಿಸಿ ನೆರವಿಗೆ ಧಾವಿಸಿತ್ತು. ಮತ್ತು ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿತ್ತು. ಆಯೋಗ ನೀಡಿದ ನೋಟಿಸ್ ಅನ್ವಯ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಆತನೂ ಜಾಮೀನು ಪಡೆದು ಹೊರಗೆ ಬಂದಿದ್ದಾನೆ.
ಬಾಲಕಿಯ ತಂದೆ ಮೇ ತಿಂಗಳಲ್ಲಿ ತಮ್ಮ ಕುಟುಂಬಕ್ಕೆ ಅತ್ಯಾಚಾರಿಗಳಿಂದ ಬೆದರಿಕೆ ಇದೆ ಎಂದು ದೂರು ನೀಡಿದ್ದರೂ ದೆಹಲಿ ಪೊಲೀಸರು ಸರಿಯಾಗಿ ಸ್ಪಂದಿಸಿರಲಿಲ್ಲ. SC/ST (ಪ್ರಿವೆನ್ಷನ್ ಆಫ್ ಅಟ್ರಾಸಿಟೀಸ್) ಕಾಯ್ದೆ,1989ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಬಾಲಕಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸದೆ ನಿರ್ಲಕ್ಷ್ಯ ತೋರಿದ ಪೊಲೀಸರನ್ನು ದೆಹಲಿ ಮಹಿಳಾ ಆಯೋಗ ತರಾಟೆಗೆ ತೆಗೆದುಕೊಂಡಿದ್ದು, ಆದಷ್ಟು ಶೀಘ್ರದಲ್ಲಿ ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ತಾಕೀತು ಮಾಡಿದೆ.
ಇತ್ತ, ಅದೆಷ್ಟು ಹೆಣ್ಣುಮಕ್ಕಳ ಹೆಣಗಳು ಉರುಳುತ್ತಿದ್ದರೂ ಪುರುಷಪ್ರಧಾನ ಕಾನೂನು ವ್ಯವಸ್ಥೆ ಅತ್ಯಾಚಾರಕ್ಕೆ ಕಠಿಣ ಹಾಗೂ ರಾಜಿಯಿಲ್ಲದ ಶಿಕ್ಷೆ ಜಾರಿಗೊಳಿಸಲು ಇನ್ನೂ ಮೀನಮೇಷ ಎಣಿಸುತ್ತ ಕುಳಿತಿದೆ.
May 1, 2019
March 22, 2019
March 19, 2019
