ನೆಟ್ ಇಲ್ಲ ಅಂದರೆ ರೇಷನ್ ಕೂಡ ಇಲ್ಲ! ಗುಜರಾತ್ ಹಳ್ಳಿಗಳ ದುರವಸ್ಥೆ
June 29, 2016
ಗುಜರಾತ್'ನ ಅರೆ ಬರಪೀಡಿತ ಹಳ್ಳಿಗಳಲ್ಲಿ ಇಂಟರ್ ನೆಟ್ ಇಲ್ಲ ಅಂದರೆ ಸಬ್ಸಿಡಿಯಲ್ಲಿ ದೊರೆಯುವ ದಿನಸಿಯ ವಿತರಣೆಯೂ ಇಲ್ಲ! ಈ ಅವ್ಯವಸ್ಥೆಗೆ ತಿಂಗಳು ಕಳೆದರೂ ಪರ್ಯಾಯ ವ್ಯವಸ್ಥೆ ಮಾಡಲಾಗಿಲ್ಲ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಅನ್ನುವ ಬೇಸರ ಈ ಹಳ್ಳಿಗರದ್ದು.

ಗುಜರಾತ್’ನಲ್ಲಿ ಬರಗಾಲದ ಸಂಕಷ್ಟ ಇನ್ನೂ ತೀರಿಲ್ಲ. ಮುಂಗಾರು ಹಗುರವಾಗಿ ಶುರುವಿಟ್ಟಿದ್ದರೂ ಕುಡಿಯುವ ನೀರಿನ ಕೊರತೆ ಹಾಗೇ ಇದೆ. ಕೃಷಿಗಾರಿಕೆಗೆ ಅಕಾಲದ ಮತ್ತು ಅಸಮರ್ಪಕ ಮಳೆ ಮತ್ತಷ್ಟು ತೊಂದರೆಯನ್ನೇ ಕೊಡುತ್ತಿದೆ. ಏಪ್ರಿಲ್’ನಿಂದ ಈವರೆಗೆ ಸುಮಾರು 1,100 ಹಳ್ಳಿಗಳನ್ನು ಅರೆ ಬರಪೀಡಿತ ಹಳ್ಳಿಗಳೆಂದು ಘೋಷಿಸಲಾಗಿದ್ದು, ಸರ್ಕಾರ ಬಡತನ ರೇಖೆಗಿಂತ ಮೇಲಿರುವವರಿಗೂ ಆಹಾರ ಧಾನ್ಯಗಳ ಮೇಲೆ ಸಬ್ಸಿಡಿ ನೀಡುತ್ತಿದೆ. ಆದರೆ ಇ – ಆಡಳಿತದ ವೈಫಲ್ಯದ ಪರಿಣಾಮ ಅನೇಕ ಹಳ್ಳಿಗರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ.
ಗುಜರಾತ್’ನ ಹಳ್ಳಿಗಳು ತಮ್ಮ ಬವಣೆಯನ್ನು ಮನದಟ್ಟು ಮಾಡಿಕೊಟ್ಟು, ಬರಪೀಡಿತ ಪ್ರದೇಶಗಳೆಂದು ಘೋಷಿಸಲು ಒತ್ತಾಯಿಸಿದ್ದವು. ಆದರೆ ಸಾಕಷ್ಟು ಜಗ್ಗಾಟದ ಬಳಿಕ 1,100 ಹಳ್ಳಿಗಳನ್ನು ಅರೆ ಬರಪೀಡಿತ ಹಳ್ಳಿಗಳೆಂದು ಘೋಷಿಸಿ, ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಒದಗಿಸುವುದಾಗಿ ರಾಜ್ಯ ಸರ್ಕಾರ ಹೇಳಿತು. ಅದರಿಂದ ತಮ್ಮ ಹೊರೆ ಕೊಂಚವಾದರೂ ಕಡಿಮೆಯಾಗುವುದೆಂದು ಭಾವಿಸಿದ್ದ ಹಳ್ಳಿಗರಿಗೆ ತಗುಲಿದ್ದು ಹೆಚ್ಚುವರಿ ಆತಂಕ. ದಿನಸಿ ಪಡೆಯುವ ಕ್ಯೂ’ನಲ್ಲಿ ನಿಂತವರಿಗೆ ತಮ್ಮ ಪಾಳಿ ಬೇಗ ಬಂದುಬಿಡಲೆಂಬ ಕಾತರ. ತಾವು ದಿನಸಿ ಕೊಳ್ಳುವವರೆಗೆ ಇಂಟರ್ನೆಟ್ ಕೈಕೊಡದಿರಲಿ ಎಂದು ಪ್ರಾರ್ಥಿಸುತ್ತ ನಿಲ್ಲುವವರೇ ಹೆಚ್ಚು!
ಹೌದು. ಗುಜರಾತ್ ಸರ್ಕಾರ ಸಬ್ಸಿಡಿ ದರದಲ್ಲಿ ದಿನಸಿ ಕೊಡಲು ಮುಂದಾಗಿದ್ದೇನೋ ಸರಿ. ಆದರೆ ಅದನ್ನು ಪಡೆಯಲು ಬರುವ ಹಳ್ಳಿಗರು ಸ್ಕ್ಯಾನಿಂಗ್ ಮಷೀನಿನ ಮೇಲೆ ತಮ್ಮ ಹೆಬ್ಬೆಟ್ಟನ್ನು ಒತ್ತಬೇಕು. ಅದರ ಗುರುತು ದಾಖಲೆ ಮಾಡಲಾದ ಗುರುತಿನೊಂದಿಗೆ ತಾಳೆಯಾದರೆ ಮಾತ್ರ ದಿನಸಿ. ಇಲ್ಲವಾದರೆ ಇಲ್ಲ. ಈ ಪ್ರಕ್ರಿಯೆಗೆ ಇಂಟರ್ನೆಟ್ ಅತ್ಯಗತ್ಯ. ಆದರೆ ಜಾಮ್ ನಗರದ ಸೋವರಾಡ ಸೇರಿದಂತೆ ಅದೆಷ್ಟೋ ಹಳ್ಳಿಗಳಲ್ಲಿ ಸಿಗ್ನಲ್ ಸರಿಯಾಗಿ ಸಿಗುವುದಿಲ್ಲ. ಹೆಬ್ಬೆಟ್ಟು ಒತ್ತಿ, ಅದನ್ನು ತಾಳೆ ಹಾಕುವಾಗ ನೆಟ್ ಸಂಪರ್ಕ ತಪ್ಪಿತೆಂದರೆ, ಚೀಲ ತಂದವರು ಖಾಲಿ ಕೈಯಲ್ಲಿ ಮರಳಲೇಬೇಕು. ಬೇರೆ ದಾರಿಯಿಲ್ಲ.
ಹಳ್ಳಿಯ ತಮ್ಮ ಮನೆಗಳಿಂದ ಇದ್ದೆಲ್ಲ ಕೆಲಸ ಬಿಟ್ಟು ಆರೇಳು ಕಿಲೋಮೀಟರ್ ದೂರ ಕ್ರಮಿಸಿ ಬರುವ ರೈತರ ಪಾಲಿಗೆ ನೆಟ್ ಕೈಕೊಟ್ಟರೆ ಸಮಯವೂ ವ್ಯರ್ಥ, ಶಕ್ತಿ ಕೂಡ. ಮೇ ತಿಂಗಳಲ್ಲಿ ಶುರುವಾದ ಈ ಅಸಮರ್ಪಕ ವಿತರಣಾ ಪದ್ಧತಿ ವಿರುದ್ಧ ನೀಡಿದ ದೂರುಗಳೆಲ್ಲವೂ ವ್ಯರ್ಥವಾಗಿವೆ ಅನ್ನುತ್ತಾರೆ ಗ್ರಾಮಸ್ಥರು. ಸಿಗ್ನಲ್ ಸಮಸ್ಯೆ ಇರುವ ಹಳ್ಳಿಗಳಲ್ಲಿ ಗುರುತು ತಾಳೆ ಹಾಕಲಿಕ್ಕೆ ಬೇರೆ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ ಆಗ್ರಹವನ್ನು ಗಾಳಿಯಲ್ಲಿ ತೂರಲಾಗಿದೆ. ದಿನದಿನವೂ 'ನೆಟ್ ಇಲ್ಲ, ರೇಷನ್ ಕೊಡಲಾಗೋದಿಲ್ಲ, ನಾಳೆ ಬಾ' ಅನ್ನುವ ಮಾತು ಕೇಳಿ ಸಾಕಾಗಿಹೋಗಿದೆ ಅನ್ನುವ ಗುಜರಾತ್ ಹಳ್ಳಿಗರು, ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಲೆಂದು ಒತ್ತಾಯಿಸುತ್ತಿದ್ದಾರೆ.
May 1, 2019
March 22, 2019
March 19, 2019
