ಹಿರಿಯ ನಾಗರಿಕರ ಮೇಲೆ ಹಲ್ಲೆ, ಆಪ್ ಶಾಸಕನ ಬಂಧನ
June 25, 2016

ಆಮ್ ಆದ್ಮಿ ಪಕ್ಷದ ನೇತಾರರು ಒಬ್ಬರಾದ ಮೇಲೆ ಒಬ್ಬರಂತೆ ವಿವಾದದಲ್ಲಿ ಸಿಲುಕುತ್ತಿದ್ದಾರೆ. ಈಗ ಶಾಸಕ ದಿನೇಶ್ ಮೊಹಾನಿಯಾ ಸರದಿ. ಗುರುವಾರದಂದು (ಜೂನ್ 23) ಮಹಿಳೆಯೊಬ್ಬರು ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆಂದು ಮೊಹಾನಿಯಾ ವಿರುದ್ಧ ದೂರು ನೀಡಿದ್ದರು. ಅದರ ಬೆನ್ನಲ್ಲೇ ಈತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಇಂದು ಮೊಹಾನಿಯಾರನ್ನು ಬಂಧಿಸಲಾಗಿದೆ. ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ದಕ್ಷಿಣ ದೆಹಲಿಯ ಹಿರಿಯ ನಾಗರಿಕರೊಬ್ಬರು ಈತನ ವಿರುದ್ಧ ನೆನ್ನೆ (ಜೂನ್24) ದೂರು ದಾಖಲಿಸಿದ್ದರು.
ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಮೊಹಾನಿಯಾ ನೆನ್ನೆ ತುಘಲಕಾಬಾದ್ ಬಡಾವಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನೀರಿನ ಅಸಮರ್ಪಕ ಪೂರೈಕೆ ವಿರುದ್ಧ ದೂರು ಸಲ್ಲಿಸಲು ಗೋವಿಂದಪುರಿ ನಿವಾಸಿ, ಹಿರಿಯ ನಾಗರಿಕ ರಾಕೇಶ್ ಕುಮಾರ್ ಇತರ ಕೆಲವರೊಂದಿಗೆ ಮೊಹಾನಿಯಾರನ್ನು ಭೇಟಿಯಾಗಲು ತೆರಳಿದ್ದರು. ದೂರಿನಿಂದ ಕೆರಳಿದ ಮೊಹಾನಿಯಾ, ಸಾರ್ವಜನಿಕರ ಎದುರಲ್ಲೇ ರಾಕೇಶ್ ಕುಮಾರ್ ಅವರ ಕೆನ್ನೆಗೆ ಹೊಡೆದು ಅಲ್ಲಿಂದ ಹೊರಟುಬಿಟ್ಟಿದ್ದರು. ಇದರಿಂದ ತಮಗೆ ದೈಹಿಕ ಹಾಗೂ ಮಾನಸಿಕವಾಗಿ ಘಾಸಿಯಾಗಿದೆ ಎಂದು ರಾಕೇಶ್ ಕುಮಾರ್ ದೂರು ನೀಡಿದ್ದರು.
ದೂರುಗಳ ಅನ್ವಯ ದೆಹಲಿ ಪೊಲೀಸರು ಮಹಿಳೆ ಜೊತೆಗಿನ ಅಸಭ್ಯ ವರ್ತನೆಯೂ ಸೇರಿದಂತೆ ಮೊಹಾನಿಯಾ ಮೇಲೆ ಸೆಕ್ಷನ್ 323,506 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಮೊಹಾನಿಯಾ ತಾವು ಯಾರೊಂದಿಗೂ ಅನುಚಿತವಾಗಿ ವರ್ತಿಸಿಲ್ಲವೆಂದೂ ತಮ್ಮ ವಿರುದ್ಧ ಪಿತೂರಿ ನಡೆಸಲಾಗ್ತಿದೆಯೆಂದೂ ಹೇಳಿಕೆ ನೀಡಿದ್ದಾರೆ.
May 1, 2019
March 22, 2019
March 19, 2019
